ನಟ ರಾಕ್ಷಸ ಅಂತಾ ಕರೆಸಿಕೊಳ್ಳುವ ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಯಶಸ್ವಿ ಸಿನಿಮಾಗಳನ್ನು ಮಾಡುತ್ತಿರುವ ನಟ. ಮಾನ್ಸೂನ್ ರಾಗ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ತಮ್ಮ ಡಾಲಿ ಪಿಕ್ಚರ್ ಅಡಿ ನಿರ್ಮಾಣ ಆಗಿರುವ ಹೆಡ್ ಬುಷ್ ಸಿನಿಮಾದ ಪ್ರಚಾರಕ್ಕೆ ಕೈ ಹಾಕಿದ್ದಾರೆ.
ಹೆಡ್ ಬುಷ್ ಸಿನಿಮಾದಲ್ಲಿ ಡಾಲಿ ಭೂಗತ ಲೋಕದದಲ್ಲಿ ಮೆರೆದಿದ್ದ ಮಾಜಿ ಡಾನ್ ಜಯರಾಜ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಈ ಹಿನ್ನೆಲೆ ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೆಡ್ ಬುಷ್ ಸಿನಿಮಾದ ಪ್ರಚಾರ ಕೆಲಸಕ್ಕೆ ಕೈ ಹಾಕಿದ್ದಾರೆ. ಧನಂಜಯ್, ಲೂಸ್ ಮಾದ ಯೋಗಿ, ಬಾಲು ನಾಗೇಂದ್ರ, ಪೂರ್ಣಚಂದ್ರ ಹಾಗೂ ನಿರ್ದೇಶಕ ಶೂನ್ಯ ಬೆಲ್ ಬಾಟಮ್ ಕಾಸ್ಟೂಮ್ನಲ್ಲಿ ಬಂದು ಬಂಡೆ ಮಹಾಕಾಳಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೆ ಹೆಡ್ ಬುಷ್ ಟೀಂ ಭೇಟಿ 1970ರ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಚಿತ್ರದ ನಿರ್ದೇಶಕ ಶೂನ್ಯ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಚಿತ್ರದಲ್ಲಿ ಧನಂಜಯ್ ಅಲ್ಲದೇ ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನವಿದೆ. ಇದೇ ವರ್ಷ ಅಕ್ಟೋಬರ್ 21ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಕನ್ನಡ, ತೆಲುಗಿನಲ್ಲಿ ರೆಡಿಯಾಗ್ತಿದೆ ಡಾಲಿ ಧನಂಜಯ್ ಅಭಿನಯದ 26ನೇ ಸಿನಿಮಾ