ಕನ್ನಡ ಅಲ್ಲದೇ ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟನಾಗಿರುವ ಡಾಲಿ ಧನಂಜಯ್ ಜಾಲಿ ರೆಡ್ಡಿಯಾಗಿ ಅಬ್ಬರಿಸಿರೋದು ಗೊತ್ತೇ ಇದೆ. ಸೂಪರ್ ಹಿಟ್ ಸಿನೆಮಾ ಪುಷ್ಪದಲ್ಲಿ ಅರ್ಭಟಿಸಿದ್ದ ಜಾಲಿರೆಡ್ಡಿ, ಇದೀಗ ಪುಷ್ಪ 2 ಚಿತ್ರದಲ್ಲೂ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ.
ಪುಷ್ಪ ಸಿನೆಮಾ, 2021ರಲ್ಲಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ. ಟ್ಯಾಲೆಂಟೆಡ್ ಡೈರೆಕ್ಟರ್ ಸುಕುಮಾರ್ ತನ್ನ ಯೋಚನಾ ಲಹರಿಯನ್ನೆ ಬದಲಿಸಿ ಮಾಡಿದ್ದ ಪುಷ್ಪ ಟಾಲಿವುಡ್ ಮಾತ್ರವಲ್ಲ, ಬಾಲಿವುಡ್ನಲ್ಲೂ ಕಮಾಲ್ ಮಾಡಿತ್ತು. ಅಲ್ಲದೆ ಚಿತ್ರದ ಪ್ರತಿಯೊಂದು ಪಾತ್ರಗಳು ಇಂದಿಗೂ ಸಿನಿರಸಿಕರ ಮನದಲ್ಲಿ ಜೀವಂತವಾಗಿವೆ. ಪುಷ್ಪರಾಜ್ ಅಲಿಯಾಸ್ ಪುಷ್ಪ ಆಗಿ ಅಲ್ಲು ಅರ್ಜುನ್ ಯಾರಿಗೂ ಬಗ್ಗೋದೆ ಇಲ್ಲ ಅಂತ ಅಬ್ಬರಿಸಿದ್ರೆ. ಶ್ರೀ ವಲ್ಲಿಯಾಗಿ ರಶ್ಮಿಕಾ ಮಂದಣ್ಣ ಸಖತ್ ಆಗಿ ಸೊಂಟ ಬಳುಕಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅದೇ ರೀತಿ ಪುಷ್ಪರಾಜ್ ಎದುರು ಜಾಲಿರೆಡ್ಡಿ ಅವತಾರದಲ್ಲಿ ಡಾಲಿ ತನ್ನ ಪೊಗರು ತೋರಿಸಿ ಮೀಸೆ ತಿರುವಿದ್ದರು.
ಹೀಗೆ ಹಲವು ವಿಶೇಷತೆಗಳಿಂದ ಪುಷ್ಪ ಸಿನೆಮಾ ಪ್ರೇಕ್ಷಕರ ಮನ ಗೆದ್ದಿತ್ತು. ಅಲ್ಲದೆ ನಿರ್ದೇಶಕ ಸುಕುಮಾರ್ ಪಕ್ಕಾ ಪ್ಲಾನ್ ಮಾಡಿ ಪುಷ್ಪ ರಿಲೀಸ್ ಬೆನ್ನಲ್ಲೆ ಪುಷ್ಪ 2 ಅನೌನ್ಸ್ ಮಾಡಿ ಕನ್ನಡದ ಚಿನ್ನದ ಮೀನು ಕೆಜಿಎಫ್ ಹಾದಿಯಲ್ಲಿ ಸಾಗುವ ಸೂಚನೆ ಕೊಟ್ಟಿದ್ದರು. ಅಲ್ಲದೆ ಪುಷ್ಪ 2 ಕತೆಗಾಗಿ ಸಾಕಷ್ಟು ಸಮಯ ಮೀಸಲಿಟ್ಟು ಪವರ್ ಫುಲ್ ಕತೆ ಸಿದ್ಧಪಡಿಸಿಕೊಂಡು, ಸದ್ದಿಲ್ಲದೆ ಪುಷ್ಟ 2 ಚಿತ್ರದ ಶೂಟಿಂಗ್ ಶುರುಮಾಡಿದ್ದಾರೆ. ಇನ್ನು ಸುಕುಮಾರ್ ಪುಷ್ಪ ಚಿತ್ರದಂತೆ ಪುಷ್ಪ 2 ನಲ್ಲೂ ಅಲ್ಲು ಅರ್ಜುನ್ ಸಖತ್ ರಗಡ್ ಅವತಾರದಲ್ಲಿ ತೋರಿಸೋಕೆ ಮುಂದಾಗಿದ್ದಾರೆ.
ಜೊತೆಗೆ ಪುಷ್ಪದಲ್ಲಿ ಡಾಲಿ ನಿಭಾಯಿಸಿದ್ದ ಜಾಲಿ ರೆಡ್ಡಿ ಪಾತ್ರ ಟಾಲಿವುಡ್ ಅಂಗಳದಲ್ಲಿ ಗಮನ ಸೆಳೆದಿತ್ತು. ಇದನ್ನು ಗಮನಿಸಿರುವ ಸುಕುಮಾರ್ ಪುಷ್ಪ 2 ಚಿತ್ರದಲ್ಲಿ ಜಾಲಿರೆಡ್ಡಿಗೆ ಹೆಚ್ಚು ಜಾಗ ಮಾಡಿ ಕೊಡುವ ಕತೆ ಮಾಡಿದ್ದಾರೆ ಅನ್ನೋ ವಿಚಾರ ಸಖತ್ ವೈರಲ್ ಆಗಿತ್ತು. ಅಲ್ಲು ಅರ್ಜುನ್ ಪಾತ್ರದ ಜೊತೆಗೆ ಡಾಲಿ ಪಾತ್ರಕ್ಕೂ ಪ್ರಾಮುಖ್ಯತೆ ನೀಡಿರುವ ಸುಕುಮಾರ್ ಪುಷ್ಪ 2 ನಲ್ಲಿ ಜಾಲಿರೆಡ್ಡಿಯನ್ನು ಮತ್ತಷ್ಟು ವೈಲೆಂಟ್ ತೋರಿಸಲಿದ್ದಾರೆ.
ಅಲ್ಲದೆ ಡಾಲಿ ಕೂಡ ಜಾಲಿ ಪಾತ್ರಕ್ಕೆ ತೆರೆಮರೆಯಲ್ಲೇ ಸಜ್ಜಾಗಿದ್ದು, ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರವನ್ನು ಮುಗಿಸಿ ಪುಷ್ಪ 2 ಅಡ್ಡಕ್ಕೆ ಕಾಲಿಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ಪುಷ್ಪ 2 ಅಡ್ಡದಿಂದ ಡಾಲಿಗೆ ಬುಲಾವ್ ಬಂದಿದೆ. ಅಲ್ಲದೆ ಜಾಲಿ ಪಾತ್ರಕ್ಕೆ ರಗಡ್ ಲುಕ್ ಬೇಕಿರೋ ಕಾರಣ ಗಡ್ಡ ಬಿಡುವಂತೆ ಸುಕುಮಾರ್ ಡಾಲಿಗೆ ಹೇಳಿದ್ದಾರೆ. ಜೊತೆಗೆ ಕೊಂಚ ದಪ್ಪ ಆಗೋಕು ಹೇಳಿದ್ದು, ಜಾಲಿ ಪಾತ್ರಕ್ಕೆ ತಕ್ಕಂತೆ ಡಾಲಿ ಈಗ ಕಟ್ಟುಮಸ್ತಾದ ದೇಹ ಹೊಂದಿದ್ಧಾರೆ. ಆದ್ರೆ ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರಕ್ಕೆ ಗಡ್ಡ ತೆಗೆಸಿರುವ ಡಾಲಿ ಈ ಎರಡು ಸಿನಿಮಾಗಳನ್ನು ಆದಷ್ಟು ಬೇಗ ಮುಗಿಸಿ, ಜಾಲಿ ಪಾತ್ರಕ್ಕೆ ಹೊಂದುವಂತೆ ಗಡ್ಡ ಬಿಟ್ಟು ನಂತರ ಪುಷ್ಟ 2 ಅಂಗಳಕ್ಕೆ ಬರಲಿದ್ದಾರೆ. ಈಗಾಗಲೇ ಪುಷ್ಪ 2ಚಿತ್ರದ ಶೂಟಿಂಗ್ ಶುರು ಮಾಡಿರುವ ಸುಕುಮಾರ್ ಹಗಲು ರಾತ್ರಿಯೆನ್ನದೆ ಶೂಟಿಂಗ್ ಮಾಡ್ತಿದ್ದು, ಫೆಬ್ರವರಿ ವೇಳೆಗೆ ಜಾಲಿ ರೆಡ್ಡಿ ಪಾತ್ರದ ಸನ್ನಿವೇಶಗಳ ಶೂಟ್ ಮಾಡಲು ಶೆಡ್ಯೂಲ್ ರೆಡಿ ಮಾಡ್ಕೊಂಡಿದ್ದಾರೆ.
ಇನ್ನು ತನಗಾಗಿ ಎರಡು ತಿಂಗಳು ಕಾಯ್ದಿರುವ ಪುಷ್ಪ ತಂಡ ಸೇರಲು ಕಾತರದಿಂದ ಕಾಯುತ್ತಿರುವ ಡಾಲಿ, ಜನವರಿಯಲ್ಲಿ ಹೊಯ್ಸಳ ಹಾಗೂ ಉತ್ತರಕಾಂಡ ಚಿತ್ರಗಳನ್ನು ಮುಗಿಸಿ, ಜಾಲಿ ಪಾತ್ರಕ್ಕೆ ಗಡ್ಡ ಬಿಟ್ಟು ರಗಡ್ ಆಗಿಯೇ ಪುಷ್ಪ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ. ಇನ್ನು ಪುಷ್ಪ 2 ನಲ್ಲಿ ಜಾಲಿ ರೆಡ್ಡಿ ಪಾತ್ರ ಪುಷ್ಪ ರಾಜ್ ಎದುರು ಯಾವ ರೀತಿ ಇರುತ್ತೆ, ಎರಡು ಮದಗಜಗಳ ಕಾಳಗ ತೆರೆಮೇಲೆ ಯಾವ ರೀತಿ ಮೂಡಿ ಬರುತ್ತೆ ಅನ್ನೋ ಕಾತರ ಈಗ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಮೂಡಿದ್ದು, ಮುಂದಿನ ವರ್ಷ ಅಂತ್ಯದ ವೇಳೆಗೆ ಈ ಎಲ್ಲಾ ಕಾತರಕ್ಕೂ ಸುಕುಮಾರ್ ಯಾವ ರೀತಿ ಉತ್ತರ ಕೊಡ್ತಾರೆ ಕಾದುನೋಡಬೇಕು.
ಇದನ್ನೂ ಓದಿ :700 ಅಭಿಮಾನಿಗಳ ಜೊತೆ ಯಶ್ ಸೆಲ್ಫಿ... ರಾಕಿಂಗ್ ಸ್ಟಾರ್ ಸರಳತೆಗೆ ಮೆಚ್ಚುಗೆ