ರಾಜ್ಯ ಚುನಾವಣೆ ಸಮೀಪಿಸುತ್ತಿದ್ದು, ಮತದಾನದ ಮಹತ್ವ ಸಾರುವ ಸಿನಿಮಾವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. 'ಕುಂಭರಾಶಿ' ಸಿನಿಮಾ ಖ್ಯಾತಿಯ ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಚಿತ್ರ ಒಂದಲ್ಲ ಒಂದು ವಿಚಾರದಲ್ಲಿ ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ 'ಪ್ರಭುತ್ವ' ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರಾಜಕೀಯ ಮುಖಂಡರಾದ ರವೀಂದ್ರ ರಿಲೀಸ್ ಮಾಡಿದ್ದಾರೆ.
ಜೊತೆಗೆ ಟ್ರೇಲರ್ನಿಂದಾಗಿ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿರುವ ನಟ ಚೇತನ್ ಚಂದ್ರ, "ಇದು ನನ್ನ 12 ನೇ ಸಿನಿಮಾ. ಮೇಘಡಹಳ್ಳಿ ಡಾ.ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಮತ್ತು ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ" ಎಂದರು.
ಬಳಿಕ ನಿರ್ದೇಶಕ ಆರ್ ರಂಗನಾಥ್ ಮಾತನಾಡಿ, "ಈ ಸಿನಿಮಾ ಮತದಾನದ ಕುರಿತಾಗಿದೆ. ಪ್ರಭುತ್ವ ಚಿತ್ರವು ಚೆನ್ನಾಗಿ ಮೂಡಿಬಂದಿದೆ" ಎಂದು ಹೇಳಿದರು. "ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ದೇಶದಲ್ಲಿ ಮತದಾನ ಅಮೂಲ್ಯವಾದ್ದದ್ದು. ಹೀಗಾಗಿ ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ" ಎಂದು ಕಥೆಗಾರ ಮೇಘಡಹಳ್ಳಿ ಡಾ. ಶಿವಕುಮಾರ್ ತಿಳಿಸಿದರು.