ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೇರಳದಲ್ಲಿ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಕಥಾವಸ್ತುವನ್ನು ಸಿನಿಮಾ ಹೊಂದಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಚಿತ್ರವನ್ನು ಬ್ಯಾನ್ ಮಾಡುವಂತೆ ಅನೇಕ ರಾಜಕೀಯ ವ್ಯಕ್ತಿಗಳು, ಮುಸ್ಲಿಂ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ.
ಈ ಮಧ್ಯೆ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ಚಿತ್ರದ ಮೇಲಿನ ನಿಷೇಧವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. "ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5ರಂದು ತೆರೆಗೆ ಬರಲಿದೆ. ನಾನು ಈ ಹಿಂದೆ ಸಮುದಾಯದ/ ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಶಶಿ ತರೂರ್ ಪ್ರತಿಕ್ರಿಯೆ: 'ದಿ ಕೇರಳ ಸ್ಟೋರಿ' ಚಿತ್ರದ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಸಂಸದ ಶಶಿ ತರೂರ್ "ಚಲನಚಿತ್ರವನ್ನು ನಿಷೇಧಿಸಲು ಕರೆ ನೀಡುತ್ತಿಲ್ಲ. ಆದರೆ ಇದು ರಾಜ್ಯದ ನೈಜತೆಯನ್ನು ತಪ್ಪಾಗಿ ನಿರೂಪಿಸುತ್ತದೆ" ಎಂದು ಹೇಳಿದ್ದಾರೆ. ಅವರು ಈ ಹಿಂದೆ ಟ್ವೀಟ್ ಮಾಡಿ "ಇದು ನಿಮ್ಮ ಕೇರಳದ ಕಥೆಯಾಗಿರಬಹುದು. ಇದು ನಮ್ಮ ಕೇರಳದ ಕಥೆಯಲ್ಲ ಸುದೀಪ್ತೋ ಸೇನ್" ಎಂದು ಹೇಳಿದ್ದರು. ಇದೀಗ ಮತ್ತೆ ಈ ಬಗ್ಗೆ ಮಾತನಾಡಿದ್ದು, "ನಾನು ಸಿನಿಮಾವನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಇದು ವಾಸ್ತವವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ಯ ದುರುಪಯೋಗವಾಗುತ್ತಿದೆ. ಇದನ್ನು ಪ್ರಶ್ನಿಸುವ ಹಕ್ಕು ಕೇರಳಿಗರಿಗೆ ಇದೇ ಅನ್ನೋದು ನನ್ನ ಭಾವನೆ" ಎಂದು ಹೇಳಿದ್ದಾರೆ.