13 ವರ್ಷಗಳ ಬಳಿಕ ಖ್ಯಾತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಮೈಸೂರು ನಗರದ ಹೊರವಲಯದ ಹೆಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 5.5 ಎಕರೆ ಪ್ರದೇಶದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವಂತೆ ನಟ ಅನಿರುದ್ಧ್ ಮುಕ್ತ ಆಹ್ವಾನ ನೀಡಿದ್ದಾರೆ.
ವಿಷ್ಣು ಅಭಿಮಾನಿಗಳ ಅಸಮಾಧಾನವೇನು?: ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಹಾಗಾಗಿ, ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕಿತ್ತು. ಆದರೆ, ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಅಭಿಮಾನಿ ಸ್ಟುಡಿಯೋದ ಮಾಲೀಕರಾದ ನಟ ಬಾಲಕೃಷ್ಣ ಅವರ ಕುಟುಂಬ ಒಪ್ಪಿಗೆ ನೀಡಿರಲಿಲ್ಲ. ಈ ಗಲಾಟೆಯಿಂದ ಬೇಸತ್ತು ಪತ್ನಿ ಭಾರತಿ ಅವರು ವಿಷ್ಣುವರ್ಧನ್ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ಕೆಲವು ವಿಷ್ಣು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಅನಿರುದ್ಧ್ ಮನವಿ:'ಅಭಿಮಾನಿ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಮಾಡಿಕೊಂಡು ಬರಲಿ. ನಮ್ಮ ಅಭ್ಯಂತರ ಇರಲಿಲ್ಲ, ಇರುವುದೂ ಇಲ್ಲ. ಒಂದು ವೇಳೆ ನಮ್ಮ ಅಭ್ಯಂತರ ಇದ್ದಿದ್ದಿರೆ ಇಷ್ಟು ವರ್ಷ ಪೂಜೆ ಮಾಡಿಕೊಂಡು ಬರಲು ಅವಕಾಶವೇ ಸಿಗುತ್ತಿರಲಿಲ್ಲ. ನಮ್ಮ ತೊಂದರೆ ಇಲ್ಲ ಅಂದ್ಮೇಲೆ ನಮ್ಮ ಅನುಮತಿ ಯಾಕೆ?, ಅನುಮತಿ ಕೊಡಬೇಕಾಗಿರುವುದು ಬಾಲಣ್ಣರವರ ಮಕ್ಕಳು. ಅಭಿಮಾನಿಗಳೇ, ಅವರ ಅನುಮತಿ ಪಡೆದುಕೊಳ್ಳಿ, ನೆನಪಿಡಿ ಅದು ಅವರ ಜಾಗ, ಎಲ್ಲಾ ಸಮಸ್ಯೆಗಳು ಬಗೆಹರಿಯತ್ತವೆ. ಹಾಗೆಯೇ ನಾವು ಯಾವತ್ತೂ ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸುವುದೂ ಇಲ್ಲ' ಎಂದಿದ್ದಾರೆ.