ಸಾಕಷ್ಟು ವಿವಾದಗಳಿಂದಲೇ 'ದಿ ಕೇರಳ ಸ್ಟೋರಿ' ಬಿಡುಗಡೆಯಾದರೂ ಸಹ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಅದಾ ಶರ್ಮಾ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆ ಗಳಿಸಿದ್ದಾರೆ. ಇವರ ಹೆಸರೇ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡಿಂಗ್ ಆಗಿದೆ. ಈ ಕಾರಣಕ್ಕಾಗಿ ಅವರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
"ನಮ್ಮ ಚಿತ್ರವನ್ನು ವೀಕ್ಷಿಸಲು ಹೊರಟಿರುವ ನಿಮಗೆಲ್ಲ ಕೋಟಿ ಧನ್ಯವಾದಗಳು. ಸಿನಿಮಾದ ಜೊತೆಗೆ ನನ್ನನ್ನು ಟ್ರೆಂಡ್ ಮಾಡಿದ್ದಕ್ಕಾಗಿ, ನನ್ನ ಅಭಿನಯವನ್ನು ಪ್ರೀತಿಸಿದ್ದಕ್ಕಾಗಿ ತುಂಬಾ ಥ್ಯಾಂಕ್ಸ್. ಈ ವಾರಾಂತ್ಯದಲ್ಲಿ 12ನೇ ತಾರೀಕಿನಂದು 'ದಿ ಕೇರಳ ಸ್ಟೋರಿ' ಅಂತರಾಷ್ಟ್ರೀಯವಾಗಿ 37 (ಅಥವಾ ಹೆಚ್ಚು) ದೇಶಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಅದಾ ಬರೆದುಕೊಂಡಿದ್ದಾರೆ.
37 ದೇಶಗಳಲ್ಲಿ ರಿಲೀಸ್: 'ದಿ ಕೇರಳ ಸ್ಟೋರಿ' ಬಿಡುಗಡೆಗೆ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ಆದರೆ ಈ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಚಿತ್ರವು ಮೇ 5ರಂದು ತೆರೆ ಕಂಡಿತು. ಅದರ ನಂತರವು ಪ್ರದರ್ಶನ ಕಾಣದಂತೆ ಪ್ರತಿಭಟನೆಗಳು ನಡೆದಿದ್ದವು. ಕೆಲವು ರಾಜ್ಯಗಳು ಕಂಪ್ಲೀಟ್ ಬ್ಯಾನ್ ಮಾಡಿದ್ರೆ, ಇನ್ನು ಕೆಲವು ರಾಜ್ಯಗಳು ಸಿನಿಮಾ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡಿತು. ಇದೀಗ ನಾಳೆಯಿಂದ 37 ದೇಶಗಳಲ್ಲಿ 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಲಿದೆ.
ಇದನ್ನೂ ಓದಿ:ದಿ ಕೇರಳ ಸ್ಟೋರಿ ಬ್ಯಾನ್.. 'ಸಿನಿಮಾ ನಿಷೇಧಿಸುವ ಹಕ್ಕು ಪಕ್ಷ, ಸರ್ಕಾರಕ್ಕಿಲ್ಲ'ವೆಂದ ನಿರ್ಮಾಪಕರ ಸಂಘ
ಟ್ರೇಲರ್ನಲ್ಲಿ ದಿ ಕೇರಳ ಸ್ಟೋರಿ ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆಯ ಕಥೆ ಎಂದು ಹೇಳಲಾಗಿತ್ತು. ಚಿತ್ರಕ್ಕೆ ಸಾಕಷ್ಟು ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ "ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳನ್ನು" ಚಿತ್ರ ಹೇಳುತ್ತದೆ ಎಂದು ಬದಲಾಯಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅದಾ, 'ಒಮ್ಮೆ ಸಿನಿಮಾವನ್ನು ವೀಕ್ಷಿಸಿದ ನಂತರ ನೀವು ಸಂಖ್ಯೆಗಳ ಬಗ್ಗೆ ಚರ್ಚಿಸುವುದಿಲ್ಲ' ಎಂದು ಹೇಳಿದ್ದಾರೆ.
6ನೇ ದಿನದ ಕಲೆಕ್ಷನ್:ದಿ ಕೇರಳ ಸ್ಟೋರಿಯ 6 ನೇ ದಿನದ ಕಲೆಕ್ಷನ್ 5ನೇ ದಿನಕ್ಕಿಂತಲೂ ಹೆಚ್ಚಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆಯು ಹೆಚ್ಚುತ್ತಿದ್ದು, ಗಳಿಕೆಯಲ್ಲಿ ಏರಿಕೆಯಾಗಿದೆ. ಬಿಡುಗಡೆಯಾಗಿ ಈವರೆಗಿನ ಒಟ್ಟು ಕಲೆಕ್ಷನ್ 68.86 ಕೋಟಿ ರೂಪಾಯಿ ಆಗಿದೆ. ಮೊದಲ ದಿನ 8.03 ಕೋಟಿ ರೂ., ಶನಿವಾರ 11.22 ಕೋಟಿ ರೂ., ಆದಿತ್ಯವಾರ 16.40 ಕೋಟಿ ರೂ., ಸೋಮವಾರ 10.7 ಕೋಟಿ ರೂ., ಮಂಗಳವಾರ 11.14 ಕೋಟಿ ರೂ. ಮತ್ತು ಬುಧವಾರ 12.14 ಕೋಟಿ ರೂ ಕಲೆಕ್ಷನ್ ಆಗಿದೆ.
ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಾಗಣದಲ್ಲಿ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖರಾಗಿದ್ದಾರೆ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಿ ಐಸಿಸ್ ಭಯೋತ್ಪಾದಕ ಸಂಘಟನೆ ಸೇರಿಸುವ ಕುರಿತಾದ ಸಿನಿಮಾ ಇದಾಗಿದೆ.
ಇದನ್ನೂ ಓದಿ:ವಿವಾದಗಳನ್ನು ಎದುರಿಸಿ ಬಾಕ್ಸ್ ಆಫೀಸ್ನಲ್ಲಿ 'ದಿ ಕೇರಳ ಸ್ಟೋರಿ' ಸದ್ದು: ಕೆಲಕ್ಷನ್ ಕೇಳಿದ್ರೆ ಹುಬ್ಬೇರಿಸ್ತೀರಾ!