ಭಾರತೀಯ ಚಿತ್ರರಂಗದಲ್ಲೀಗ ಆರ್‌ಆರ್‌ಆರ್ ಚಿತ್ರದ್ದೇ ಚರ್ಚೆ. ಸಾಗರದಾಚೆಗೂ ನಾಟು ನಾಟು ಸದ್ದು ಮಾಡುತ್ತಿದೆ. ಭಾರತದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ, ತೆಲುಗು ಸೂಪರ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅದ್ಭುತ ಅಭಿನಯದ ಆರ್‌ಆರ್‌ಆರ್ ಸಿನಿಮಾ ಕ್ರೇಜ್ ವಿಶ್ವದೆಲ್ಲೆಡೆ ಪಸರಿಸಿದೆ.
ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್‌ಆರ್‌ಆರ್ ಚಿತ್ರತಂಡ ಮತ್ತು ಭಾರತೀಯ ಸಿನಿಮಾ ರಂಗದ ಗಮನ ಆರ್‌ಆರ್‌ಆರ್ ಚಿತ್ರದ ಮೇಲೆ ಕೇಂದ್ರೀಕೃತವಾಗಿದೆ. ಇದೇ ಮಾರ್ಚ್ 12ರಂದು ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಟ ರಾಮ್ಚರಣ್ ಚಿತ್ರದ ಪ್ರಮೋಶನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಆಸ್ಕರ್ 2023 ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕಾಡೆಮಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್‌ಆರ್‌ಆರ್ ಚಿತ್ರದ ಸೂಪರ್ ಹಿಟ್ ನಾಟು ನಾಟು ಹಾಡು ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ ಭಾರತದ ಬಹುಬೇಡಿಕೆ ನಟ ರಾಮ್ಚರಣ್ ಅಮೆರಿಕದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಎರಡು ಅಂತಾರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿದ್ದಾರೆ. ಎಂಟರ್‌ಟೈನ್‌ಮೆಂಟ್ ಟುನೈಟ್, ಕಲ್ಚರ್ ಪಾಪ್ ಹೆಸರಿನ ಶೋಗಳಲ್ಲಿ ಭಾಗಿಯಾದ ರಾಮ್ಚರಣ್ ಜಾಗತಿಕ ಮಟ್ಟದಲ್ಲಿ ಆರ್‌ಆರ್‌ಆರ್ ಜನಪ್ರಿಯತೆ ಬಗ್ಗೆ ಮಾತನಾಡಿದರು.
ಆರ್‌ಆರ್‌ಆರ್ ಜನಪ್ರಿಯತೆ ಬಗ್ಗೆ ಮಾತನಾಡಿದ ನಟ ರಾಮ್ ಚರಣ್, 'ನಾಟು ನಾಟು' ನಮ್ಮ ಹಾಡು ಮಾತ್ರವಲ್ಲ, ಅದು ಸಾರ್ವಜನಿಕ ಹಾಡಾಗಿದೆ ಎಂದು ಹೇಳಿದರು. ವಿವಿಧ ವಯೋಮಾನದ ಜನರು ಮತ್ತು ವಿವಿಧ ಸಂಸ್ಕೃತಿಗಳ ಜನರು ಇದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದ್ದಾರೆ. ಜನರಿಗೆ ಸಾಹಿತ್ಯ ಅರ್ಥವಾಗದಿದ್ದರೂ, ಅವರು ತಮ್ಮ ಪ್ರೀತಿಯನ್ನು ಈ ಚಿತ್ರಕ್ಕೆ, ಹಾಡಿಗೆ ಸಮರ್ಪಿಸಿದ್ದಾರೆ ಎಂದು ಹೇಳಿದರು.