ಇದೇ ನವೆಂಬರ್ 20 ರಿಂದ 28ರ ವರೆಗೆ ಗೋವಾದಲ್ಲಿ ನಡೆಯಲಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (International Film Festival of India) ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಈ ಬಹುನಿರೀಕ್ಷಿತ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಇಲ್ಲಿ ಹಲವು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ತಾರೆಯರು ಮತ್ತು ಸಿನಿಪ್ರಿಯರ ನಡುವೆ ಸಂಪರ್ಕ ಸೃಷ್ಟಿಸುವ ಉದ್ದೇಶವನ್ನು ಈ ಪ್ರತಿಷ್ಠಿತ ಕಾರ್ಯಕ್ರಮ ಹೊಂದಿದೆ.
2023ರ ''ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'' ಹೊಸ ಸಿನಿಮಾಗಳನ್ನು ಪ್ರದರ್ಶಿಸಲಿದೆ. ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಭಾಗಿ ಆಗಲಿದ್ದಾರೆ. ಸಿನಿಮಾಗಳು ಮತ್ತು ಟೆಲಿವಿಷನ್ ಸೀರಿಸ್ಗಳನ್ನು "ಗಾಲಾ ಪ್ರೀಮಿಯರ್ಸ್"ನ ಭಾಗವಾಗಿ ಪ್ರದರ್ಶಿಸಲಾಗುತ್ತದೆ. ಇದೊಂದು ಸಿನಿಮಾ ಸ್ಟಾರ್ಸ್ - ಸಾರ್ವಜನಿಕರ ನಡುವಿನ ಸಂಬಂಧವನ್ನು ಬೆಳೆಸಲು ಹೊಸದಾಗಿ ಪರಿಚಯಿಸಲಾಗಿರುವ ಕಾರ್ಯಕ್ರಮ. ಸಲ್ಮಾನ್ ಖಾನ್ ಸಂಬಂಧಿ ಅಲಿಜೆ ಅಗ್ನಿಹೋತ್ರಿ ನಟಿಸಿರುವ ಫಾರೆ (Farrey) ಜೊತೆ ಹಲವು ಸಿನಿಮಾಗಳು ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಭಾಗವಾಗಿ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ, ಪಂಕಜ್ ತ್ರಿಪಾಠಿ ಅವರ 'ಕಡಕ್ ಸಿಂಗ್' ಮತ್ತು ವಿಜಯ್ ಸೇತುಪತಿ, ಅರವಿಂದ್ ಸ್ವಾಮಿ ಮತ್ತು ಅದಿತಿ ರಾವ್ ಹೈದರಿ ನಟಿಸಿರುವ, ಎ.ಆರ್ ರೆಹಮಾನ್ ಸಂಗೀತವಿರುವ 'ಗಾಂಧಿ ಟಾಕ್ಸ್' ಪ್ರೀಮಿಯರ್ (world premiere) ನಡೆಯಲಿದೆ.
ಕಿಶೋರ್ ಪಾಡುರಂಗ್ ಬೇಲೇಕರ್ ಅವರ ಗಾಂಧಿ ಟಾಕ್ಸ್ ಬಂಡವಾಳಶಾಹಿ, ವರ್ಣಭೇದ ನೀತಿ ಸೇರಿದಂತೆ ಹಲವು ವಿಚಾರಗಳ ಸುತ್ತ ಸುತ್ತುತ್ತದೆ. ಸೌಮೇಂದ್ರ ಪಾಧಿ ಅವರ ಫಾರೆ ಸಿನಿಮಾ ಒಂದು ರೋಮಾಂಚನಕಾರಿ ಪ್ರಯಾಣವನ್ನು ಒಳಗೊಂಡಿರಲಿದೆ. ಅನಿರುದ್ಧ ರಾಯ್ ಚೌಧರಿ ಅವರ ಕಡಕ್ ಸಿಂಗ್, ಸಮಸ್ಯೆಯೊಂದರಿಂದ (retrograde amnesia) ಬಳಲುತ್ತಿರುವ ಇನ್ಸ್‌ಪೆಕ್ಟರ್ ಎ.ಕೆ ಶ್ರೀವಾಸ್ತವ ಅವರ ಕಥೆಯನ್ನು ಹೇಳಲಿದೆ. ಅನಾರೋಗ್ಯದ ಹೊರತಾಗಿಯೂ, ಅವರು ಚಿಟ್ ಫಂಡ್ ಹಗರಣದ ಸಂಪೂರ್ಣ ರಹಸ್ಯವನ್ನು ಬಿಚ್ಚಿಡಲು ಶ್ರಮ ವಹಿಸಿರೋದು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮಿಲಿಂದ್ ರಾವ್ ಅವರ 'ದಿ ವಿಲೇಜ್' ಚಿತ್ರವನ್ನೂ ಕೂಡ ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.