ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಈ ವಾರದ ಕೊನೆಯಲ್ಲಿ ಅವರು ಚಿತ್ರೀಕರಣದ ಸೆಟ್ಗೆ ವಾಪಸ್ ಆಗಲಿದ್ದಾರೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಕೇಟ್ ವಿನ್ಸ್‌ಲೆಟ್ ಸದ್ಯಕ್ಕೆ ಲೀ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಚಿತ್ರೀಕರಣ ಹಂಗೇರಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ವೇಳೆ ದೃಶ್ಯಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೇಟ್ ವಿನ್ಸ್‌ಲೆಟ್ ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್, ಕೇಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಶೀಘ್ರವೇ ಅವರು ಗುಣಮುಖರಾಗಲಿದ್ದು, ಈ ವಾರದಲ್ಲಿ ಮತ್ತೆ ಕೇಟ್ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
'ಲೀ' ಚಿತ್ರವನ್ನು ಹಾಪ್‌ಸ್ಕೋಚ್ ಫಿಲ್ಮ್ಸ್ ಹಾಗೂ ರಾಕೆಟ್ ಸೈನ್ಸ್ ಕಂಪನಿ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. ಎಲೆನ್ ಕುರಾಸ್ ನಿರ್ದೇಶಿಸುತ್ತಿರುವ ಈ ಸಿನಿಮಾ ಚಿತ್ರೀಕರಣ 2015 ರಿಂದ ನಡೆಯುತ್ತಿದೆ. ಕೇಟ್ ಆಸ್ಪತ್ರೆಗೆ ದಾಖಲಾದ ಕಾರಣ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದು ಅಮೆರಿಕದ ಖ್ಯಾತ ಮಹಿಳಾ ಫೋಟೋ ಜರ್ನಲಿಸ್ಟ್ ಎಲಿಜಬೆತ್ ಲೀ ಮಿಲ್ಲರ್ ಬಯೋಪಿಕ್ ಆಗಿದೆ. ಚಿತ್ರದಲ್ಲಿ ಕೇಟ್ ವಿನ್ಸ್‌ಲೆಟ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ.
1997 ರಲ್ಲಿ ತೆರೆ ಕಂಡ ಟೈಟಾನಿಕ್ ಸಿನಿಮಾ ಚಿತ್ರಪ್ರೇಮಿಗಳ ಫೇವರೆಟ್ ಲಿಸ್ಟ್‌ನಲ್ಲಿದೆ. ಈ ಚಿತ್ರ ನೋಡಿಯೇ ಸಾಕಷ್ಟು ಜನ ಕೇಟ್ ವಿನ್ಸ್‌ಲೆಟ್ ಅಭಿಮಾನಿಗಳಾಗಿದ್ದಾರೆ. ಈ ಸಿನಿಮಾವನ್ನು ಜೇಮ್ಸ್ ಕೆಮರೂನ್ ನಿರ್ದೇಶಿಸಿದ್ದರು. ಬ್ರಿಟಿಷ್ ಪ್ಯಾಸೆಂಜರ್ ಲೈನರ್, ಆರ್‌ಎಂಎಸ್ ಟೈಟಾನಿಕ್, 15 ಏಪ್ರಿಲ್ 1912 ರಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿತ್ತು. ಈ ದುರ್ಘಟನೆಯಲ್ಲಿ 1500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇಂದಿಗೂ ಈ ಚಿತ್ರ ಪ್ರೇಮಿಗಳ ಮನದಲ್ಲಿ ಫೇವರೆಟ್ ಆಗಿಯೇ ಉಳಿದಿದೆ.