ನವದೆಹಲಿ:ಹೆಸರಾಂತ ಹಾಸ್ಯನಟ ರಾಜು ಶ್ರೀವಾಸ್ತವ್ ಸೆಪ್ಟೆಂಬರ್ 21 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು 42 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದರು. ರಾಜು ಶ್ರೀವಾಸ್ತವ್ ಅವರ ಅಂತ್ಯಸಂಸ್ಕಾರ ಸೆಪ್ಟೆಂಬರ್ 22 ಗುರುವಾರ ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ನಡೆಯಿತು. ಆದರೆ, ಇದಕ್ಕೂ ಮೊದಲು ರಾಜು ಶ್ರೀವಾಸ್ತವ್ ಅವರ ಮರಣೋತ್ತರ ಪರೀಕ್ಷೆಯನ್ನು ಹೊಸ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಏಮ್ಸ್ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್ ಗುಪ್ತಾ ಹೇಳಿದ್ದಾರೆ.
ನೂತನ ತಂತ್ರಜ್ಞಾನದಿಂದ ರಾಜು ಮರಣೋತ್ತರ ಪರೀಕ್ಷೆ ಮರಣೋತ್ತರ ಪರೀಕ್ಷೆಗೆ ನೂತನ ತಂತ್ರಜ್ಞಾನ ಬಳಕೆ:ಮರಣೋತ್ತರ ಪರೀಕ್ಷೆಯ ಹೊಸ ವಿಧಾನಕ್ಕೆ 'ವರ್ಚುವಲ್ ಮರಣೋತ್ತರ ಪರೀಕ್ಷೆ' ಎಂದೂ ಕರೆಯಲಾಗುತ್ತದೆ. ದೇಹವನ್ನು ವಿರೂಪಗೊಳಿಸದೆ, ಸಾಮಾನ್ಯ ಮರಣೋತ್ತರ ಪರೀಕ್ಷೆಗಿಂತ ವಿಭಿನ್ನವಾಗಿ ಮಾಡಲಾಗುತ್ತದೆ. ಈ ಶವ ಪರೀಕ್ಷೆಯನ್ನು ಹೈಟೆಕ್ ಡಿಜಿಟಲ್ ಎಕ್ಸ್-ರೇಗಳು ಮತ್ತು ಸಿಟಿ ಸ್ಕ್ಯಾನ್‌ಗಳ ಸಹಾಯದಿಂದ ಮಾಡಲಾಗುತ್ತದೆ. ಸಾಂಪ್ರದಾಯಿಕ ಮರಣೋತ್ತರ ಪರೀಕ್ಷೆಗೆ ಹೋಲಿಸಿದರೆ ಹೊಸ ತಂತ್ರಜ್ಞಾನ ಅಥವಾ ವರ್ಚುವಲ್ ಶವಪರೀಕ್ಷೆಯು ಸಾಮಾನ್ಯ ಮರಣೋತ್ತರ ಪರೀಕ್ಷೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಡಾ.ಗುಪ್ತಾ ಹೇಳಿದರು
ಇದೊಂದು ಹೊಸ ತಂತ್ರಜ್ಞಾನ ಕಾರ್ಯವಿಧಾನವಾಗಿದ್ದು, ದೇಹವನ್ನು ಕುಟುಂಬಕ್ಕೆ ಆದಷ್ಟು ಬೇಗ ಹಸ್ತಾಂತರಿಸಲು ಅನುವು ಮಾಡಿಕೊಡುತ್ತದೆ. ಶವಪರೀಕ್ಷೆಯ ಸಮಯದಲ್ಲಿ ಸಂತ್ರಸ್ತರ ಕುಟುಂಬಕ್ಕೆ ನೋವನ್ನು ಉಂಟುಮಾಡಬಹುದು. ಕಳೆದ ಎರಡು ವರ್ಷಗಳಿಂದ ವರ್ಚುವಲ್ ಶವಪರೀಕ್ಷೆಯನ್ನು ಮಾಡುತ್ತಿರುವ ಆಗ್ನೇಯ ಏಷ್ಯಾದಲ್ಲಿ AIIMS ದೆಹಲಿ ಏಕೈಕ ಸಂಸ್ಥೆಯಾಗಿದೆ ಎಂದು ಡಾ.ಗುಪ್ತಾ ಹೇಳಿದರು.
ರಾಜು ಶ್ರೀವಾಸ್ತವ್ ಮರಣೋತ್ತರ ಪರೀಕ್ಷೆ ಏಕೆ?: ರಾಜು ಶ್ರೀವಾಸ್ತವ್ ಅವರ ಮರಣೋತ್ತರ ಪರೀಕ್ಷೆಯನ್ನು ಏಕೆ ಮಾಡಲಾಯಿತು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಏಮ್ಸ್ ವೈದ್ಯರು, ರಾಜು ಶ್ರೀವಾಸ್ತವ್ ಅವರನ್ನು ಆರಂಭದಲ್ಲಿ ಏಮ್ಸ್‌ಗೆ ಕರೆತಂದಾಗ ಪ್ರಜ್ಞೆಯೇ ಇರಲಿಲ್ಲ. ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಬಿದ್ದಿದ್ದರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಅವರ ಸಾವು ಅನುಮಾನ ಮೂಡಿಸಿತ್ತು. ಅದಕ್ಕಾಗಿಯೇ ಇದು ವೈದ್ಯಕೀಯ, ಕಾನೂನು ಪ್ರಕರಣವಾಯಿತು ಎಂದು ಡಾ ಗುಪ್ತಾ ಹೇಳಿದರು. ವ್ಯಕ್ತಿಯೊಬ್ಬ ಸಾವು ಅನುಮಾನದಿಂದ ಕೂಡಿದಾಗ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ರೇಡಿಯೋಲಾಜಿಕಲ್ ಪರೀಕ್ಷೆ ಬರಿಗಣ್ಣಿಗೆ ಗೋಚರಿಸದ ಮುರಿತಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಮಾಡುತ್ತದೆ. ವರ್ಚುವಲ್ ಶವಪರೀಕ್ಷೆಯಿಂದ ರಕ್ತಸ್ರಾವ ಪತ್ತೆಹಚ್ಚಲು ಸಹಾಯವಾಗುತ್ತದೆ. ಹಾಗೆಯೇ ಮೂಳೆಗಳಲ್ಲಿನ ಮುರಿತ ಸೇರಿದಂತೆ ಅನೇಕ ರೀತಿಯಿಂದ ಶವಪರೀಕ್ಷೆಗೆ ನೂತನ ತಂತ್ರಜ್ಞಾನ ಸಹಾಯವಾಗುತ್ತದೆ ಈ ಎಕ್ಸ್-ರೇ ಕಾಪಿಗಳು ಸಂಪೂರ್ಣ ಕಾನೂನು ಪುರಾವೆ ಮೌಲ್ಯವನ್ನು ಹೊಂದಿವೆ ಎಂದ ವೈದ್ಯರು ತಿಳಿಸಿದರು.
ದೆಹಲಿಯಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ರಾಜು ಶ್ರೀವಾಸ್ತವ್ ನಿಧನ:ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ದೆಹಲಿ ಏಮ್ಸ್‌ಗೆ ಕರೆತರಲಾಗಿತ್ತು. ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ (58) ಸೆಪ್ಟಂಬರ್ 21ರಂದು ನಿಧನರಾದರು. ಸ್ಟ್ಯಾಂಡ್-ಅಪ್ ಕಮೇಡಿಯನ್ (stand-up comedian) ಆಗಿರುವ ರಾಜು ಶ್ರೀವಾಸ್ತವ್ ಮೂಲತಃ ಕಾನ್ಪುರದವರು. ಇವರು, ಉತ್ತರ ಪ್ರದೇಶ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ನೆರವೇರಿತು ಹಾಸ್ಯನಟ ರಾಜು ಶ್ರೀವಾಸ್ತವ್ ಅಂತ್ಯಸಂಸ್ಕಾರ
ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಜು ಶ್ರೀವಾಸ್ತವ್, ಮೈನೇ ಪ್ಯಾರ್ ಕಿಯಾ, ಮೈನ್ ಪ್ರೇಮ್ ಕಿ ದಿವಾನಿ ಹೂ, ಆಮ್ದಾನಿ ಅಥಾನಿ ಖರ್ಚಾ ರುಪೈಯಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಮತ್ತು ಬಿಗ್ ಬಾಸ್ 3 ನಂತಹ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದರು. ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು. ದೆಹಲಿಯ ನಿಗಮ್ ಬೋಧ್ ಘಟ್ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.