ಮುಂಬೈ:ಬಾಲಿವುಡ್ ನಟ ಸಲ್ಮಾನ್ ಖಾನ್ ನಂತರ ಇದೀಗ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರಿಗೆ ಜೀವ ಬೆದರಿಕೆ ಬಂದಿದೆ. ಈ ಸಂಬಂಧ ಸೋಮವಾರ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಇದೀಗ ಆರೋಪಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2021 ಡಿಸೆಂಬರ್ 9ರಂದು ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ-ವಿಕ್ಕಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ವೈಭವೋಪೇತ ಸಮಾರಂಭದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು, ಸಂಬಂಧಿಕರು ಹಾಗು ಸಿನಿಮಾ ಕ್ಷೇತ್ರದ ದಿಗ್ಗಜರು ಭಾಗವಹಿಸಿದ್ದರು.
ಇದನ್ನೂ ಓದಿ:ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರ ಬರೆದಿದ್ದು ಗ್ಯಾಂಗ್ಸ್ಟರ್ ಬಿಷ್ಣೋಯಿ ಆಪ್ತ
2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆಯಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿದ್ದರು. ಈ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾತನಾಡಿದ್ದ, ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿರುವ ಬಿಷ್ಣೋಯ್ ಎಂಬಾತ, ಸಲ್ಮಾನ್ ಖಾನ್ ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದ. ಬಿಷ್ಣೋಯ್ ನಿಕಟ ಸಂಪರ್ಕದಲ್ಲಿದ್ದ ರಾಹುಲ್ ಅಲಿಯಾಸ್ ಸುನ್ನಿಯನ್ನು 2020ರಲ್ಲಿ ಪೊಲೀಸರು ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದಾಗ ಸಲ್ಮಾನ್ ಹತ್ಯೆಗೆ ರೂಪಿಸಿರುವ ಸಂಚು ಬೆಳಕಿಗೆ ಬಂದಿತ್ತು.
ಆರೋಪಿಯ ಬಂಧಿಸಿದ ಪೊಲೀಸರು: ಘಟನೆಗೆ ಸಂಬಂಧಿಸಿದಂತೆ ಸಾಂತಾ ಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆ ನಡೆಸಿರುವ ಪೊಲೀಸರು ಆರೋಪಿ ಮನ್ವಿಂದರ್ ಎಂಬಾತನ ಬಂಧನ ಮಾಡಿದ್ದಾರೆ. ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದ ನಟನಾಗಿದ್ದು, ಕತ್ರಿನಾ ಕೈಫ್ ಅವರನ್ನ ಮದುವೆಯಾಗಲು ಬಯಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಕಿ ಕೌಶಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ:ಅದ್ಧೂರಿ ಮದುವೆ ನಂತ್ರ ಹೆಲಿಕಾಪ್ಟರ್ ಏರಿದ ವಿಕ್ಕಿ-ಕತ್ರಿನಾ: ಪಯಣ ಹನಿಮೂನಿಗಾ..!?