ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇ ಭಿ ಚೌಕಿದಾರ್ ಅಭಿಯಾನವನ್ನು ಬೆಂಬಲಿಸಿ ಕಾಲೇಜು ವಿದ್ಯಾರ್ಥಿಗಳು ಪೇಟ ತೊಟ್ಟು ನಗರದ ಎಸ್ ಡಿಎಂ ಕಾಲೇಜಿನಿಂದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ವರೆಗೆ ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಪರ ಮತಪ್ರಚಾರ ನಡೆಸಿದರು.
ಈ ಮತಪ್ರಚಾರ ಅಭಿಯಾನದಲ್ಲಿ ಎಸ್ ಡಿಎಂ ಕಾಲೇಜು, ಕೆನರಾ ಕಾಲೇಜು, ರಾಮಕೃಷ್ಣ ಕಾಲೇಜು, ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳು ಈ ಮತಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮೋದಿ ಮೋದಿ ಮತ್ತೊಮ್ಮೆ ಮೋದಿ, ಮಗದೊಮ್ಮೆ ಮೋದಿ ಎಂಬ ಘೋಷಣೆಗಳನ್ನು ಕೂಗಿದರು.
ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಂದ ಮೇ ಭಿ ಚೌಕಿದಾರ್ ಅಭಿಯಾನ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ಜಯೇಶ್ ಪಿ.ಕೆ.ಮಾತನಾಡಿ, ಈ ಹಿಂದಿನ ಯುಪಿಎ ಸರಕಾರವು ಭ್ರಷ್ಟಾಚಾರದಿಂದ ಮುಳುಗಿ ಹೋಗಿದ್ದು, ನಮ್ಮ ದೇಶದ ಸೈನಿಕರಿಗೂ ಯಾವುದೇ ಗೌರವ ನೀಡುತ್ತಿರಲಿಲ್ಲ. ಆದರೆ ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ, ದೇಶದ ಗೌರವವನ್ನು ಇಮ್ಮಡಿಗೊಳಿಸಿದೆ. ಆದ್ದರಿಂದ ಮತ್ತೊಮ್ಮೆ ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು ಎಂದು ನಾವು ಈ ಚೌಕಿದಾರ್ ಮತಪ್ರಚಾರ ಅಭಿಯಾನ ಕೈಗೊಂಡಿದ್ದೇವೆ.
ನಗರದ ಹಂಪನಕಟ್ಟೆಯಲ್ಲಿರುವ ಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಕೆ. ಮಾತನಾಡಿ, ಕಾಂಗ್ರೆಸ್ ಇಂದು ಜಾತಿಯ ಮೂಲಕ ಒಡಕು ತರಲು ಪ್ರಯತ್ನಿಸುತ್ತಿದೆ. ಆದರೆ ಪ್ರಧಾನಿ ಮೋದಿಯವರು ಎಲ್ಲರೂ ಒಂದೇ ಎಂಬ ಭಾವನೆಯ ಮೂಲಕ ಆಡಳಿತ ನಡೆಸುತ್ತಿದ್ದಾರೆ. ನಾವು ಮುಂದಿನ ಬಾರಿಯೂ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಬೇಕು.
ಅಲ್ಲದೆ ದ.ಕ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ನಂಬರ್ ಒನ್ ಸಂಸದರೆಂದು ಹೆಸರು ಗಳಿಸಿಕೊಂಡರೂ, ಅವರ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ದ.ಕ.ಜಿಲ್ಲೆಗೆ ಸುಮಾರು 16,500 ಕೋಟಿ ರೂ. ಅನುದಾನ ತಂದಿದ್ದಾರೆ ಮತ್ತೊಮ್ಮೆ ನಳಿನ್ ಕುಮಾರ್ ಸಂಸದರಾಗಬೇಕು. ಯುಪಿಎ ಸರಕಾರವನ್ನು ಪೂರ್ಣವಾಗಿ ನಿರ್ನಾಮ ಮಾಡಿ ಮತ್ತೊಮ್ಮೆ ಮೋದಿ ಸರಕಾರವನ್ನು ಗೆಲ್ಲಿಸಬೇಕೆಂದು ಮೇ ಭಿ ಚೌಕಿದಾರ್ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.