ಆಗ್ರಾ (ಉತ್ತರ ಪ್ರದೇಶ): ಸ್ಫೋಟಕ ವಸ್ತು ಇಟ್ಟಿರುವ ಸುಳಿವು ಹಿನ್ನೆಲೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್ಮಹಲ್ ಅನ್ನು ಮುಚ್ಚಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಯುಪಿ ಪೊಲೀಸ್ ಕಂಟ್ರೋಲ್ ರೂಂಗೆ ತಾಜ್ಮಹಲ್ ಒಳಗೆ ಬಾಂಬ್ ಇಟ್ಟಿರುವುದಾಗಿ ದೂರವಾಣಿ ಕರೆ ಮಾಡಿ ಬೆದರಿಸಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ:ಪತಿ ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ: ದಾವಣಗೆರೆ ಜಿಲ್ಲಾ ಕೋರ್ಟ್ ಮಹತ್ವದ ತೀರ್ಪು
ಪ್ರವಾಸಿಗರಿಗೆ ನಿರ್ಬಂಧ ಹೇರಿ ತಾಜ್ಮಹಲ್ ಬಾಗಿಲುಗಳನ್ನು ಮುಚ್ಚಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಗ್ರಾ ಎಸ್ಪಿ ಶಿವರಾಮ್ ಯಾದವ್, ’’ನಾವು ಕಂಟ್ರೋಲ್ ರೂಂ ನಂಬರ್ಗೆ ಬಂದ ಕರೆಯೊಂದನ್ನ ಸ್ವೀಕರಿಸಿದ್ದು, ಮಿಲಿಟರಿ ನೇಮಕಾತಿಯಲ್ಲಿ ಕೆಲ ವ್ಯತ್ಯಾಸಗಳಾಗಿದ್ದು, ಆ ನೇಮಕಾತಿಯಲ್ಲಿ ತಾನು ಆಯ್ಕೆ ಆಗಿಲ್ಲ. ಹೀಗಾಗಿ ತಾಜ್‌ಮಹಲ್‌ನಲ್ಲಿ ಬಾಂಬ್ ಇಡಲಾಗಿದೆ, ಅದು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ‘‘ ಎಂದು ಮಾಹಿತಿ ನೀಡಿದ್ದಾರೆ. ಈ ಕರೆ ಹಿನ್ನೆಲೆಯಲ್ಲಿ ತಾಜ್ಮಹಲ್ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಇದೇ ವೇಳೆ ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಲೊಕೇಷನ್ ಟ್ರೇಸ್
ಫೋನ್ ಕರೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯಿರುವ ಸ್ಥಳ ಪತ್ತೆ ಮಾಡಲಾಗಿದ್ದು, ಆತ ಫಿರೋಜಾಬಾದ್ನಲ್ಲಿರುವುದು ತಿಳಿದು ಬಂದಿದೆ ಎಂದು ಯಾದವ್ ತಿಳಿಸಿದ್ದಾರೆ.