ಮಣಿಪುರ:ಡ್ರಗ್ಸ್ ಕಳ್ಳಸಾಗಣೆ ಪ್ರಕರಣಗಳ ವಿರುದ್ಧ ದೇಶದೆಲ್ಲೆಡೆ ಪೊಲೀಸರು ಸಮರ ಸಾರಿದ್ದು, ಹೆಡ್ ಕಾನ್ಸ್‌ಟೇಬಲ್ ಮನೆ ಮೇಲೆ ದಾಳಿ ನಡೆಸಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇಂಪಾಲದ ಪೊಲೀಸ್ ಸಿಬ್ಬಂದಿಯೊಬ್ಬರ ಮನೆಯಲ್ಲಿ ಬರೋಬ್ಬರಿ 90 ಕೋಟಿ ರೂ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ಹೆಡ್‌ಕಾನ್ಸ್‌ಟೇಬಲ್ ಮನೆಯಲ್ಲಿ₹90 ಕೋಟಿ ಮೌಲ್ಯದ 400 ಕೆಜಿ ಡ್ರಗ್ಸ್ ಪತ್ತೆ
ದೇಶದ ಈಶಾನ್ಯ ಭಾಗದಲ್ಲಿರುವ ಪುಟ್ಟ ರಾಜ್ಯ ಮಣಿಪಾಲದ ಇಂಪಾಲದಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು 90 ಕೋಟಿ ರೂಪಾಯಿ ಮೌಲ್ಯದ 400 ಕೆ.ಜಿ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ.
ಯಾಯ್ ರಿಕ್‌ಪೋಕ್ ತುಲಿಹಾಲ್‌ನ ಅವಂಗ್ ಲೆಕೈ ಪ್ರದೇಶದಲ್ಲಿ ಪೊಲೀಸ್ ಮುಖ್ಯಪೇದೆಯ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ಸ್ ಕಾರ್ಖಾನೆಯನ್ನೇ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಇಷ್ಟೊಂದು ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಹೆಡ್‌ಕಾನ್ಸ್‌ಟೇಬಲ್ ಸೇರಿ ಮೂವರನ್ನು ಬಂಧಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರಗ್ಸ್‌ನ ಮೌಲ್ಯ ಸುಮಾರು 90 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಮತ್ತೊಂದೆಡೆ, ಅಸ್ಸೋಂನ ಗುವಾಹಟಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು 17.5 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ತೈಲ ಟ್ಯಾಂಕರ್‌ನೊಳಗೆ 205 ಸೋಪ್ ಬಾಕ್ಸ್‌ಗಳಲ್ಲಿ 2.5 ಕೆಜಿ ಹೆರಾಯಿನ್ ತುಂಬಿಸಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.