ಮಲಪ್ಪುರಂ(ಕೇರಳ): ಮಂಜೇರಿ ಸಹಕಾರಿ ಬ್ಯಾಂಕ್‌ನ ಸರ್ವರ್ ಹ್ಯಾಕ್ ಮಾಡಿ 70 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ನೈಜೀರಿಯನ್ ಪ್ರಜೆಗಳನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ಇಮ್ಯಾಕ್ಯುಲೇಟ್ ಚಿನ್ನುಸ್ ಎಂಬ ಮಹಿಳೆ ಮತ್ತು ಇನ್ನಾ ಕಾಸ್ಮೋಸ್ ಎಂಬ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಎಸ್‌ಎಚ್‌ಒ ಎಂ.ಜೆ.ಅರುಣ್ ನೇತೃತ್ವದ ತಂಡ 15 ದಿನಗಳ ಕಾಲ ದೆಹಲಿಯಲ್ಲಿಯೇ ಬೀಡುಬಿಟ್ಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತೀವ್ರ ತನಿಖೆ ನಡೆಸುತ್ತಿದೆ.
ಮೊಬೈಲ್ ಬ್ಯಾಂಕಿಂಗ್ ಸರ್ವರ್ ಹ್ಯಾಕ್ ಮಾಡಿ ಈ ಇಬ್ಬರು ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಚಾಲಾಕಿಗಳು ಸರ್ವರ್ ಹ್ಯಾಕ್ ಮಾಡಿದ ಬಳಿಕ ಗ್ರಾಹಕರ ಸಂಖ್ಯೆಯನ್ನು ಮತ್ತೊಂದು ಸಂಖ್ಯೆಗೆ ಬದಲಾಯಿಸುತ್ತಿದ್ದರು. ಮೊಬೈಲ್ ಬ್ಯಾಂಕಿಂಗ್ ಇಲ್ಲದ ನಾಲ್ವರು ಗ್ರಾಹಕರ ದೈನಂದಿನ ವಹಿವಾಟಿನ ಮಿತಿಯನ್ನು ಹೆಚ್ಚಿಸಿ ಅವರ ಖಾತೆಯಲ್ಲಿದ್ದ ಹಣವನ್ನು ಈ ಶಂಕಿತರು ದೋಚಿದ್ದರು ಎಂದು ಬ್ಯಾಂಕ್ ಮ್ಯಾನೇಜರ್ ಅಬ್ದುಲ್ ನಾಸರ್ ತಿಳಿಸಿದ್ದಾರೆ.
ಮೊಬೈಲ್ ಬ್ಯಾಂಕಿಂಗ್ ಇಲ್ಲದ ಗ್ರಾಹಕರ ವಹಿವಾಟು ಹೆಚ್ಚುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದರು. ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಮಲಪ್ಪುರಂ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮಲಪ್ಪುರಂ ಡಿವೈಎಸ್ಪಿ ಅಬ್ದುಲ್ ಬಶೀರ್, ಸೈಬರ್ ಕ್ರೈಂ ಪೊಲೀಸ್ ಠಾಣೆ ಎಸ್‌ಎಚ್‌ಒ ಮತ್ತು ಡಾನ್ಸಾಫ್ ಸ್ಕ್ವಾಡ್‌ನೊಂದಿಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಸೈಬರ್ ವಂಚಕರ ಬಂಧನಕ್ಕೆ ಜಾಲ ಬೀಸಿದ್ದರು.