ಕೋಡೇರು(ಆಂಧ್ರ ಪ್ರದೇಶ): ಕೌಟುಂಬಿಕ ಕಲಹದಿಂದ ತನ್ನ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಗರಕರ್ನೂಲ್ ಜಿಲ್ಲೆಯ ಕೊಡೇರು ಮಂಡಲದ ಎತ್ತಂ ಗ್ರಾಮದ ಉಪನಗರದ ಬೆಟ್ಟದಲ್ಲಿ ಈ ಘಟನೆ ನಡೆದಿದೆ.
ಕುಡಿಕಿಲ ಮೂಲದ ಓಂಕಾರ ಎಂಬಾತ ನಾಲ್ಕು ವರ್ಷಗಳ ಹಿಂದೆ ಅದೇ ಗ್ರಾಮದ ಮಹೇಶ್ವರಿ ಎಂಬುವರನ್ನು ವಿವಾಹವಾಗಿದ್ದ. ಈತನಿಗೆ ಚಂದನ (3) ಮತ್ತು ವಿಶ್ವನಾಥ್ (1) ಎಂಬ ಇಬ್ಬರು ಮಕ್ಕಳಿದ್ದಾರೆ. ಬುಧವಾರ ನಾಗರ್‌ಕರ್ನೂಲ್‌ನಲ್ಲಿ ಪತ್ನಿಗೆ ಕುಟುಂಬ ಯೋಜನೆ ಆಪರೇಷನ್ ಮಾಡಿಸುವುದಾಗಿ ನಂಬಿಸಿ ಓಂಕಾರ್ ತನ್ನ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ.
ಕೊಲ್ಲಾಪುರದಿಂದ ಪೆದ್ದಕೊತ್ತಪಲ್ಲಿ ಮಾರ್ಗವಾಗಿ ಬರುತ್ತಿದ್ದಾಗ ಪತಿ-ಪತ್ನಿಯ ನಡುವೆ ಜಗಳವಾಗಿದೆ. ಪತ್ನಿಯನ್ನು ಕೊಲೆ ಮಾಡುವುದಾಗಿ ಓಂಕಾರ್ ಈ ಸಮಯದಲ್ಲಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹೇಶ್ವರಿ ದ್ವಿಚಕ್ರ ವಾಹನದಿಂದ ಕೆಳಗೆ ಜಿಗಿದಿದ್ದಾಳೆ. ನಂತರ ಓಂಕಾರ್ ಇಬ್ಬರು ಮಕ್ಕಳೊಂದಿಗೆ ಕೊಡೇರು ಮಂಡಲದ ಇಚ್ಚಂ ಗ್ರಾಮದ ಹೊರವಲಯದಲ್ಲಿರುವ ಬೆಟ್ಟಕ್ಕೆ ಹೋಗಿದ್ದಾನೆ. ದ್ವಿಚಕ್ರ ವಾಹನವನ್ನು ಪಕ್ಕದ ಜಮೀನಿನಲ್ಲಿ ಬಿಟ್ಟು ಮಕ್ಕಳನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಮಕ್ಕಳ ಕತ್ತು ಕೊಯ್ದಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಕೆಳಗೆ ಬಂದು ರಸ್ತೆಯಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿದ ಮಹೇಶ್ವರಿ ಓಡಿಹೋಗಿ ಪೆದ್ದಕೊತ್ತಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.