ಶ್ರೀನಗರ:ಪೊಲೀಸ್ಮನ್ ಒಬ್ಬರು ಭಯೋತ್ಪಾದಕ ಎಂದು ತಪ್ಪಾಗಿ ಭಾವಿಸಿ ಸಹೋದ್ಯೋಗಿಗೆ ಗುಂಡಿಕ್ಕಿದ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಭಯೋತ್ಪಾದಕರು ಹಂದ್ವಾರದಲ್ಲಿ ದೇವಸ್ಥಾನಕ್ಕೆ ನುಗ್ಗುವುದನ್ನು ತಪ್ಪಿಸಲು ಹೋಗಿ ತನ್ನ ಸಹೋದ್ಯೋಗಿಗೆ ಗುಂಡಿಕ್ಕಿದ್ದಾರೆ.
ಪರಿಣಾಮ ಸಹೋದ್ಯೋಗಿ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಗರ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ವೇಳೆ ಲೌಡ್ಸ್ಪೀಕರ್ನಲ್ಲಿ ಕೂಗಿ ಹೇಳಲಾಗಿತ್ತು. ಆದರೆ ಮೃತಪಟ್ಟ ಪೊಲೀಸ್ ಇದಕ್ಕೆ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರಿಂದ ಭಯೋತ್ಪಾದಕನೇ ಇರಬೇಕೆಂದು ಭಾವಿಸಿ ಫೈರಿಂಗ್ ಮಾಡಿದ್ದರಿಂದ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ ಹಂದ್ವಾರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆ ದುರದೃಷ್ಟಕರವಾಗಿದೆ. ಅಜಯ್ ಧರ್ ಅವರು ಮಧ್ಯರಾತ್ರಿ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ ಎಂದು ಉತ್ತರ ಕಾಶ್ಮೀರ ಡಿಐಜಿ ಸುಜಿತ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.