ತುಮಕೂರು: ದಾನಗಳಲ್ಲಿ ಅತೀ ಶ್ರೇಷ್ಠವಾದದ್ದು ರಕ್ತದಾನ. ಅಂತಹ ದಾನ ಮಾಡುವ ಮೂಲಕ ಮಹಿಳೆಯೊಬ್ಬರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಬೆಂಗಳೂರು ಮೂಲದ ನಿವಾಸಿ ಮಧುರಾ ಅಶೋಕ್ ಕುಮಾರ್ 117 ಬಾರಿ ರಕ್ತದಾನ ಮಾಡುವ ಮೂಲಕ ದಾಖಲೆ ಜೊತೆ ಮಾನವೀಯತೆ ಮೆರೆದಿದ್ದಾರೆ.
ಎನ್ಜಿಒಗಳ ಮೂಲಕ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಧುರಾ ಅಶೋಕ್ ಕುಮಾರ್, 180 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ವಯಂಪ್ರೇರಿತವಾಗಿ 117 ಬಾರಿ ರಕ್ತದಾನ ಮಾಡಿದ್ದಾರೆ.
ಗಿನ್ನೆಸ್ ದಾಖಲೆ ಮಾಡಿದ ಮಧುರಾ ಅಶೋಕ್ ಕುಮಾರ್ ಮಧುರಾ ಅವರು ಪ್ರಸಿದ್ಧ ಪುಣ್ಯಕ್ಷೇತ್ರ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗಾ ಶ್ರೀಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಠದ ಸಾವಿರಾರು ಮಕ್ಕಳಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆ ಸಂಜೆ ಪ್ರಾರ್ಥನಾ ಸಮಯದಲ್ಲಿ ಶ್ರೀಗಳ ಸಮ್ಮುಖದಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ನಾನು ಎಂದಿಗೂ ರೆಕಾರ್ಡ್ ಮಾಡಬೇಕು ಎಂಬ ಉದ್ದೇಶದಿಂದ ರಕ್ತದಾನ ಮಾಡಿಲ್ಲ. ನಮ್ಮ ತಂದೆ ಮತ್ತು ಮಾವ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಸಮಾಜ ಸೇವೆ ಹುಟ್ಟಿನಿಂದಲೇ ಬಂದಿದೆ. ಲಯನ್ಸ್ ಸಂಸ್ಥೆಯ ಸದಸ್ಯೆಯಾದ ನಂತರ ರಕ್ತಕ್ಕಾಗಿ ಜನರು ಪರದಾಡುವುದನ್ನ ನೋಡಿ ಅದರ ಬಗ್ಗೆ ಮಾಹಿತಿ ಪಡೆದು 18 ವರ್ಷದಿಂದ ರಕ್ತದಾನ ಮಾಡಲು ಪ್ರಾರಂಭಿಸಿದೆ. ನಾನು ಆರೋಗ್ಯವಂತಳಾಗಿ ಇರೋವರೆಗೂ ರಕ್ತದಾನ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಮಸಾಲೆ ಪದಾರ್ಥಗಳಿಂದ ಚಿತ್ರ ಬಿಡಿಸಿ ಗಿನ್ನೆಸ್ ದಾಖಲೆ ಮಾಡಿದ ಆಂಧ್ರ ವಿದ್ಯಾರ್ಥಿನಿ