ತುಮಕೂರು: ಡೆತ್ನೋಟ್ ಬರೆದಿಟ್ಟು, ವಿಡಿಯೋ ಮಾಡಿ ನಾಪತ್ತೆಯಾಗಿದ್ದ ಶ್ರೀಗಂಧ ಬೆಳಗಾರ ವಿಶುಕುಮಾರ್ ಇಂದು ಬೆಳಗ್ಗೆ ತುಮಕೂರಿನ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಅವರ ಮನವೊಲಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಗ್ರಾಮದಲ್ಲಿನ 22 ಜನರು 8 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಮರಗಳಿದ್ದ ಪ್ರದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಈ ಜಾಗಕ್ಕೆ ನೋಟಿಫಿಕೇಶನ್ ಮಾಡಿ 4 ವರ್ಷಗಳಾಗಿದ್ದು, 1 ವರ್ಷದ ಹಿಂದೆ ಪರಿಹಾರ ನೀಡಲಾಗಿದೆ. ಅದು ಕೂಡ ಖರೀದಿಸಿದ ಭೂಮಿಯ ಬೆಲೆಗಿಂತ ಕಡಿಮೆ ಪರಿಹಾರ ನೀಡಿರುವುದಾಗಿ ರೈತರು ಆರೋಪಿಸಿದ್ದರು.
ಶ್ರೀಗಂಧ ಮರಗಳಿಗೆ ದರ ನಿಗದಿ ಮಾಡುವಲ್ಲಿ ಕೂಡ ತಾರತಮ್ಯ ಎಸಗಲಾಗುತ್ತಿದೆ. ಅಲ್ಲದೆ ಮಾವಿನಮರ ಹಾಗೂ ಹುಣಸೆ ಮರಕ್ಕೆ ನೀಡುವಂತಹ ಪರಿಹಾರವನ್ನು ಶ್ರೀಗಂಧದ ಮರಕ್ಕೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಶ್ರೀಗಂಧದ ಮರಕ್ಕೆ ಅಧಿಕ ಬೆಲೆ ಇದ್ದು, ಅದನ್ನು ನಿಗದಿಪಡಿಸುವಂತೆ ಒತ್ತಾಯಿಸಿದ್ದರು. ಆದರೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ನಿನ್ನೆ ಡೆತ್ನೋಟ್ ಬರೆದಿಟ್ಟು ಕಣ್ಮರೆಯಾಗಿದ್ದರು.