ತುಮಕೂರು:ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕೆಂಬ ಕಾರಣಕ್ಕೆ ಹಠ ಮಾಡಿ ಸಣ್ಣ ನೀರಾವರಿ ಖಾತೆ ಪಡೆದುಕೊಂಡಿದ್ದೆ. ಈ ಬಾರಿ ಒತ್ತಾಯ ಮಾಡುವುದಿಲ್ಲ ಎಂದು ನೂತನ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದು ನೂತನ ಸಚಿವರಾದ ಮಾಧುಸ್ವಾಮಿ ಹಾಗೂ ಬಿ.ಸಿ. ನಾಗೇಶ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಧುಸ್ವಾಮಿ, ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವನಾಗಿದ್ದೇನೆ. ಈ ಬಾರಿ ಇಂತಹದ್ದೇ ಖಾತೆ ಬೇಕೆಂದು ಒತ್ತಾಯಿಸುವುದಿಲ್ಲ. ಈಗಾಗಲೇ ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಹುತೇಕ ಕಾಮಗಾರಿಗಳು ಅನುಷ್ಠಾನಗೊಳ್ಳುವ ಹಂತದಲ್ಲಿವೆ. ಸಣ್ಣ ನೀರಾವರಿ ಖಾತೆ ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಇಬ್ಬರು ಸಚಿವರಾಗಿದ್ದೇವೆ. ಮುಖ್ಯಮಂತ್ರಿಗಳು ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇವೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಕೆಲವರಿಗೆ ಬೇಸರವಾಗುತ್ತದೆ. ರಾಜಕಾರಣದಲ್ಲಿ ಇದು ಸರ್ವೇಸಾಮಾನ್ಯ ಎಂದರು.