ತುಮಕೂರು: ಮೊದಲು ಪಾಕಿಸ್ತಾನದ ಬಗ್ಗೆ ಇಮ್ರಾನ್ ಖಾನ್ ನೋಡಿಕೊಳ್ಳಲಿ. ಅಲ್ಲಿ ಕ್ಲಿಷ್ಟಕರ ವಾತಾವರಣ ಇದೆ, ಅದನ್ನು ನೋಡಿಕೊಳ್ಳಲಿ. ನಮ್ಮ ದೇಶದ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ದೇಶದ ಬಗ್ಗೆ ಯಾವುದೇ ದೇಶ ಪ್ರಶ್ನೆ ಮಾಡಿದರೆ ನಾವು ಅದನ್ನು ಖಂಡಿಸುತ್ತೇವೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಮಹಮದ್ ಷಪಿ ಹೇಳಿದ್ದಾರೆ.
ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಸರಿ ಶಾಲನ್ನು ಯಾರೂ ವಿರೋಧಿಸಲ್ಲ. ಹಿಜಾಬ್ ಹಾಕುವುದು ಶೇರಿಯತ್ನಲ್ಲಿ ಇದೆ. ಹೀಗಾಗಿ, ಅವಕಾಶ ಬೇಕು.
ನಮ್ಮ ಸಮುದಾಯದಲ್ಲೂ ಕೆಲ ಕಿಡಿಗೇಡಿಗಳು ಇದ್ದಾರೆ. ಅವರು ಮಾಡಿದರು ಅಂತಾ ಇಡೀ ಸಮುದಾಯದ ಹೆಸರು ಕೆಡಿಸಬಾರದು. ಉಡುಪಿಯಲ್ಲಿ ಮುಗಿಸಬೇಕಾದ ವಿಚಾರ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ ಎಂದರು.
ಮುಸ್ಲಿಂ ಧಾರ್ಮಿಕ ನಾಯಕರೆಲ್ಲಾ ಸೇರಿ ಈ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಸಹೋದರ ಧರ್ಮಿಯ ಸ್ವಾಮೀಜಿಯವರೊಂದಿಗೂ ವಿಷಯ ಹಂಚಿಕೊಳ್ಳುತ್ತಿದ್ದೇವೆ. ಮೊದಲು ಯಾವ ರೀತಿಯಲ್ಲಿ ನಮ್ಮ ಕರ್ನಾಟಕ ಸೌಹಾರ್ದಯುತವಾಗಿ ಇತ್ತೋ, ಅದಕ್ಕೆ ಧಕ್ಕೆ ಬರಬಾರದು. ಸೌಹಾರ್ದ ಹಾಗೂ ಸಾಮರಸ್ಯವನ್ನು ಕೆದಕುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟ ಹಾಕಬೇಕು ಎಂದರು.
ಕರ್ನಾಟಕ ಕರ್ನಾಟಕವಾಗಿಯೇ ಉಳಿಯಬೇಕು. ಆದ್ರೆ, ಈಗ ಕೋಮುಗಲಭೆ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ, ಸ್ವಾಮೀಜಿಯವರೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಸ್ವಾಮೀಜಿಯವರು ಯಾವ ಹಂತದಲ್ಲೂ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗದಂತೆ ಮುನ್ನಡೆಯಬೇಕಿದೆ ಎಂದರು.