ಪಾವಗಡ/ತುಮಕೂರು :ಕಳೆದೊಂದು ತಿಂಗಳಲ್ಲಿ ಪಾವಗಡ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ.
ಸೋಮವಾರ ಸುರಿದ ಮಳೆಯಿಂದ ಈ ಭಾಗದ ಸುಮಾರು 15 ಹಳ್ಳಿಗಳಿಗೆ ನೀರಿನ ಮೂಲವವಾಗಿದ್ದ ಗುಂಡಾರ್ಲ ಹಳ್ಳಿ ಗ್ರಾಮದ ಕೆರೆ ತುಂಬಿ ಕಟ್ಟೆ ಒಡೆದಿದೆ. ಇನ್ನು ಈ ನೀರು ಸುಮಾರು 8 ಕಿ.ಮೀ ದೂರವಿರುವ ಪಳವಳ್ಳಿ ಕೆರೆಗೆ ನುಗ್ಗಿದೆ. ಗುಂಡಾರ್ಲ ಹಳ್ಳಿ ಕೆರೆ ಪಕ್ಕದ ಹಲವು ಹಳ್ಳಿಗಳ ನೀರಿನ ಮೂಲ. ಈ ಕೆರೆಯಲ್ಲಿ ನೀರಿದ್ದರೆ, ಸುಮಾರು 4-5 ತಿಂಗಳವರೆಗೂ ಪಕ್ಕದ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಬತ್ತುತ್ತಿರಲಿಲ್ಲ. ಅಲ್ಲದೇ ಸ್ಥಳೀಯ ರೈತರ ಕೃಷಿ ಚಟುವಟಿಕೆಗಳಿಗೂ ಈ ಕೆರೆಯ ನೀರು ಆಧಾರ.
ಕಟ್ಟೆ ಒಡೆದು ಕೆರೆ ನೀರು ಖಾಲಿ ಹಲವು ವರ್ಷಗಳ ನಂತರ ಗುಂಡಾರ್ಲ ಹಳ್ಳಿ ಕೆರೆ ತುಂಬಿದ್ದರಿಂದ, ರೈತರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಆದರೆ ಸೋಮವಾರ ರಾತ್ರಿ ಕೆರೆಯ ಕಟ್ಟೆ ಒಡೆದು ನೀರೆಲ್ಲಾ ಪಳವಳ್ಳಿ ಕೆರೆಗೆ ಹೋಗಿದೆ. ಈ ಮಧ್ಯೆ ಮರಳು ಚೀಲಗಳನ್ನಿಟ್ಟು ನೀರು ನಿಲ್ಲಿಸಲು ಗ್ರಾಮಸ್ಥರು ಪ್ರಯತ್ನ ಮಾಡಿದರು. ಈ ಪ್ರಯತ್ನ ಸಾಧ್ಯವಾಗದೆ ಕೆರೆಯ ಕಟ್ಟೆ ಸಂಪೂರ್ಣವಾಗಿ ಒಡೆದು ಹೋಗಿ, ಕೆರೆ ನೀರೆಲ್ಲ ಖಾಲಿಯಾಗಿದೆ.
ಇನ್ನೊಂದೆಡೆ ಕಳೆದ ಮೂವತ್ತು ವರ್ಷಗಳಿಂದ ನೀರು ಕಾಣದೆ ಪಾವಗಡದ ರಾಜವಂತಿ ಕೆರೆ ಒಣಗಿ ಹೋಗಿತ್ತು. ಸೋಮವಾರ ಬೆಳಗ್ಗಿನ ಜಾವ ಸುರಿದ ಮಳೆಗೆ ಕೆರೆ ತುಂಬಿದ ಹಿನ್ನೆಲೆಯಲ್ಲಿ, ಜೆಡಿಎಸ್ ಜಿಲ್ಲಾದ್ಯಕ್ಷ ಆರ್. ಸಿ. ಅಂಜಿನಪ್ಪ ಕೆರೆಗೆ ಬಾಗಿನ ಅರ್ಪಿಸಿದರು.