ಶಿವಮೊಗ್ಗ:ಬೆಳಗ್ಗೆ ಲಷ್ಕರ್ ಮೊಹಲ್ಲಾದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಖಂಡಿಸಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಿಂದ ಗಾಂಧಿ ಬಜಾರ್ನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10 ಗಂಟೆ ತನಕ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರ ಆದೇಶದ ಮೇರೆಗೆ ಶಿವಮೊಗ್ಗ ತಾಲೂಕು ದಂಡಾಧಿಕಾರಿ ನಾಗರಾಜ್ ನಿಷೇಧಾಜ್ಞೆ ಘೋಷಿಸಿದರು. ದುಷ್ಕರ್ಮಿಗಳು ನಾಗೇಶ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಬಂದ್ ಮಾಡಲಾಯಿತು.
ಇದನ್ನೂ ಓದಿ...ಆಟೋ, ಕಾರ್ ಪುಡಿಗಟ್ಟಿದ ಕಿಡಿಗೇಡಿಗಳು: ಶಿವಮೊಗ್ಗದ ಗಾಂಧಿ ಬಜಾರ್ ಪ್ರಕ್ಷುಬ್ದ
ಈ ಘಟನೆಯನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಎಸ್ಪಿ ಶಾಂತರಾಜು ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಆದರೂ ಕಾರ್ಯಕರ್ತರು ಸ್ಪಂದಿಸದೇ ಪ್ರತಿಭಟನೆ ಮುಂದುವರೆಸಿದರು. ತಿರುಪಳ್ಳಯ್ಯನ ಕೇರಿಯ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ಇದರಿಂದ ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಗಾಬರಿಯಾದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ...ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ: ಗಾಂಧಿ ಬಜಾರ್ ದಿಢೀರ್ ಬಂದ್
ಕಸ್ತೂರ್ಬಾ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಗಾಂಧಿ ಬಜಾರ್, ಮೀನು ಮಾರುಕಟ್ಟೆ, ಲಷ್ಕರ್ ಮೊಹಲ್ಲಾ, ಎಂ.ಕೆ.ಕೆ. ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಗನ್ ಕೊಡ್ತೆನೆ ಹೊಡಿತ್ತೀಯಾ ಎಂದ ಐಜಿಪಿ:ನಗರದ ಸಿದ್ದಯ್ಯ ರಸ್ತೆ ಬಳಿ ಆಟೋ, ಕಾರು ಸೇರಿದಂತೆ ನಂದಿನಿ ಮಿಲ್ಕ್ ಪಾರ್ಲರ್ ಅನ್ನು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದು, ಅದರಲ್ಲಿದ್ದ ಅಜ್ಜಿಯೊಬ್ಬರ ಕೈಗೆ ಗಾಯವಾಗಿದೆ. ಕಿಡಿಗೇಡಿಗಳು ಅಲ್ಲಿಂದ ಕಾಲ್ಕಿತ್ತ ನಂತರ ಐಜಿಪಿ ರವಿ ಅವರು ಆಗಮಿಸಿದರು.
ಈ ವೇಳೆ ಗುಂಪಿನಲ್ಲಿದ್ದ ಕೆಲವರು ನಮ್ಮವರ ಮೇಲೆ ಹಲ್ಲೆ ನಡೆದಿದೆ. ನೀವು ಬಂದು ಏನ್ ಮಾಡ್ತೀರಾ ಎಂದು ಕೇಳಿದರು. ಆಗ ಐಜಿಪಿ ನಮ್ಮ ಕೆಲಸ ನೀವು ಮಾಡ್ತಿರಾ? ಗನ್ ಕೊಡ್ಲ ಎಂದರು. ನಂತರ ಜನರು ಅಲ್ಲಿಂದ ಹೊರಟು ಹೋದರು.
ಘಟನೆ ಹಿನ್ನೆಲೆ: ಮುಂಜಾನೆ ನೆಹರು ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆ ತೆರಳಿ ಮನೆಗೆ ವಾಪಸ್ ಬರುವಾಗ ಹಿಂಬದಿಯಿಂದ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ನಾಗೇಶ್ ತಲೆ ಹಾಗೂ ಮುಖಕ್ಕೆ ಹೊಡೆದಿದ್ದರು. ಪರಿಣಾಮ ಮೂಗಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಶ್ ಆರೋಗ್ಯವನ್ನು ಸಂಸದ ಬಿ.ವೈ.ರಾಘವೇಂದ್ರ ವಿಚಾರಿಸಿದರು.
ಇದನ್ನೂ ಓದಿ...ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ