ಶಿವಮೊಗ್ಗ: ಖೇಲೋ ಇಂಡಿಯಾ ಯೋಜನೆಗೆ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಸ್ಥಳ ಪರಭಾರೆ ಮಾಡಿದರೆ ಶಿವಮೊಗ್ಗ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸದಸ್ಯರ ಸಭೆ ಸಹ್ಯಾದ್ರಿ ಕ್ಯಾಂಪಸ್ ಉಳಿಸಿ ಹೋರಾಟ ಸಮಿತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಮೂರ್ತಿ ಅವರು, ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ನ 18 ಎಕರೆ ಜಾಗವನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ.
ಜಿಲ್ಲಾಡಳಿತ ಹಾಗೂ ಸಂಸದರು ಆಯನೂರು ಬಳಿ ಇರುವ ವಿಶೇಷ ತರಬೇತಿ ಕೇಂದ್ರಕ್ಕೆ ಮೀಸಲಿಟ್ಟ 50 ಎಕರೆ ಜಾಗದಲ್ಲಿ ಖೇಲೋ ಇಂಡಿಯಾ ಯೋಜನೆಯ ವಿಶೇಷ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಬೇಕು. ಅದನ್ನು ಹೊರತು ಪಡಿಸಿ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಹೊರಟರೆ ಶಿವಮೊಗ್ಗ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಸಭೆಯಲ್ಲಿ ರೈತ ಸಂಘದ ವರಿಷ್ಠರಾದ ಕೆ.ಟಿ ಗಂಗಾಧರ್, ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್ ಹಾಗೂ ಕ್ಯಾಂಪಸ್ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.