ಶಿವಮೊಗ್ಗ:ದೇವಾಲಯಕ್ಕೆ ಬಂದಿದ್ದ ವೃದ್ಧೆಯೊಬ್ಬರು ದಿಢೀರ್ ಕಾಣೆಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರತ್ನಮ್ಮ(70) ನಾಪತ್ತೆಯಾದವರು.
ಪ್ರಕರಣ- 1: ಚೋರಡಿ ಗ್ರಾಮದ ಹೊರ ವಲಯದಲ್ಲಿ ಹರಿಯುವ ಕುಮುದ್ವತಿ ನದಿಯಲ್ಲಿ ವೃದ್ಧೆ ಕೊಚ್ಚಿ ಹೋಗಿರುವ ಅನುಮಾನವಿದೆ. ನಾಗರತ್ನಮ್ಮ ನಿನ್ನೆ ಕುಮುದ್ವತಿ ನದಿ ಪಕ್ಕದಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ಹೋಗಿದ್ದರು. ತದನಂತರ ನದಿಯಲ್ಲಿ ಮುಖ ತೊಳೆಯಲು ತೆರಳಿದ್ದಾಗ ಆಯತಪ್ಪಿ ನದಿಗೆ ಬಿದ್ದಿರಬಹುದು. ಇಲ್ಲವೇ ಮನೆಯವರ ಮೇಲೆ ಬೇಸರಗೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ನದಿದಡದ ಮೇಲೆ ಶಾಲು, ಹಣ್ಣು-ಕಾಯಿ ಕಂಡುಬಂದಿದೆ.
ಪ್ರಕರಣ- 2:ಜಮೀನಿನಲ್ಲಿ ಕೆಲಸಕ್ಕೆಂದು ಹೋಗಿದ್ದ ರೈತನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ರಿಪ್ಪನ್ಪೇಟೆಯ ದೊಡ್ಡಬಿಳಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಿ.ಕೆ.ಗಣಪತಿ(72) ಮೃತರು. ನಿನ್ನೆ ಬೆಳಗ್ಗೆ ತಮ್ಮ ಜಮೀನಿಗೆ ಹೋದಾಗ ಹಳ್ಳಕ್ಕೆ ಹೊಂದಿಕೊಂಡಂತಿರುವ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಹೊಸನಗರ ತಾಲೂಕಿನ ಶರ್ಮಿಣ್ಯವತಿ , ಕುಮುದ್ವತಿ ನದಿಗಳು ಉಕ್ಕಿ ಹರಿಯುತ್ತಿವೆ. ತೋಟಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಭಾರಿ ಮಳೆ: ರಾಷ್ಟ್ರೀಯ ಹೆದ್ದಾರಿ 534 ಸಂಚಾರ ನಿರ್ಬಂಧ