ಶಿವಮೊಗ್ಗ: ಹಣ ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಉಪಾಧ್ಯಕ್ಷರೊಬ್ಬರು ಕಚೇರಿ ಮುಂದಿರುವ ಮರವೇರಿ ಕುಳಿತು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಘಟನೆ ಹೊಸನಗರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬಂದಿದೆ.
ತಾಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಮರವೇರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅನುದಾನ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮರವೇರಿ ಕುಳಿತಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ವಿಶಿಷ್ಟ ಪ್ರತಿಭಟನೆ ಮೂಡುಗೊಪ್ಪ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 29 ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಲು ಅನುಮತಿ ಸಿಕ್ಕಿತ್ತು. ಈ ಪೈಕಿ ಕೆಲವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಫಲಾನುಭವಿಗಳಲ್ಲಿ ಒಂದಿಬ್ಬರು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಹಣಕ್ಕಾಗಿ ಅವರು ಪಂಚಾಯಿತಿಗೆ ಹತ್ತಿಪ್ಪತ್ತು ಸಾರಿ ಓಡಾಡಿದ್ದಾರೆ. ಅದರೂ ಹಣ ಬಿಡುಗಡೆಯಾಗಿಲ್ಲ. ಮೊನ್ನೆ ನಾನೇ ಹೋಗಿ ಕಾಲಿಗೆ ಬೇಕಾರೂ ಬೀಳ್ತೀನಿ ಹಣ ಬಿಡುಗಡೆ ಮಾಡಿ ಅಂದಿದ್ದೆ. ಇವತ್ತು ಹಣ ಹಾಕುವುದಾಗಿ ಹೇಳಿದ್ದರು. ಆದರೆ ಬ್ಯಾಂಕ್ಗೆ ಹೋಗಿ ಪರಿಶೀಲಿಸಿದಾಗ ದುಡ್ಡು ಬಂದಿರಲಿಲ್ಲ ಅಂತಾರೆ ಕರುಣಾಕರ ಶೆಟ್ಟಿ.
ಅಧಿಕಾರಿಗಳು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿ, ಅವರ ಪಾಸ್ಬುಕ್ ಜೆರಾಕ್ಸ್ ಪ್ರತಿ ತಂದು ತೋರಿಸುವವರೆಗೂ ಮರದಿಂದ ಕೆಳಗಿಳಿಯುವುದಿಲ್ಲ. ಒಂದು ವಾರವಾದರೂ ಇಲ್ಲಿಯೇ ಇರುತ್ತೇನೆ ಅಂತ ಹಠ ಹಿಡಿದಿದ್ದಾರೆ.