ಚಿಕ್ಕಮಗಳೂರು :ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಾನವಿಗೌಡ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿರುವ ಸಂಗತಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಟ್ಟಿನಮನೆ ಸಮೀಪದ ಮಕ್ಕಿ ಮನೆಯ ಯುವತಿ ಗಾನವಿಗೌಡ (22) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಕಳೆದ ವಾರ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು.
ಸಾವಿನಲ್ಲೂ ಸಾರ್ಥಕತೆ.. ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ನರ್ಸ್ ಗಾನವಿ ದೇಹದಾನ.. ಕೂಡಲೇ ಆಕೆಯನ್ನು ತಪಾಸಣೆ ನಡೆಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಗಾನವಿಗೌಡರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದ್ದರು.
ಇದರಿಂದ ಆಕೆಯನ್ನು ಬದುಕುಳಿಸುವುದು ಕಷ್ಟ ಎಂದು ಕುಟುಂಬದ ಸದಸ್ಯರಲ್ಲಿ ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ನರ್ಸ್ ಗಾನವಿ ದೇಹದಾನ ಇತರರ ಬಾಳಿಗೆ ಬೆಳಕಾದ ಗಾನವಿ :ಗಾನವಿಗೌಡ ಬದುಕುಳಿಯುವುದಿಲ್ಲ ಎಂದು ತಿಳಿದ ಬಳಿಕ ವೈದ್ಯರು, ಹೃದಯ, ಕಿಡ್ನಿ, ಕಣ್ಣು, ಲಿವರ್ ಅನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಗಾನವಿಗೌಡ ಸಾವಿನಲ್ಲೂ ಇತರರ ಬಾಳಿಗೆ ಬೆಳಕಾಗಿದ್ದಾರೆ.
ಮದುವೆಯ ಮನೆಯಲ್ಲಿ ಸೂತಕ :ಮೃತ ಗಾನವಿಯ ಸಹೋದರಿಯ ಮದುವೆ ಫೆಬ್ರವರಿ 20 ರಂದು ನಿಗದಿಯಾಗಿತ್ತು. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುವ ಸಮಯದಲ್ಲಿ ಸೂತಕದ ಛಾಯೆ ಆವರಿಸಿದೆ. ಗಾನವಿಯ ಮೃತ ದೇಹವನ್ನು ಸ್ವಗ್ರಾಮಕ್ಕೆ ತಂದು ಅಂತಿಮ ಸಂಸ್ಕಾರ ನೆರವೇರಿಸುವ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಚಿವ ಸುಧಾಕರ್ ಟ್ವೀಟ್ ಮಾಡಿ ಗೌರವ :ಗಾನವಿಯ ದೇಹದಾನ ಮಾಡಿದ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಡಾ.ಕೆ.ಸುಧಾಕರ್, ಗಾನವಿಯ ಕುಟುಂಬಸ್ಥರು ಅತೀವ ದುಖಃದಲ್ಲೂ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಗಾನವಿ ದೇಹದಾನ ಮಾಡಿ ಎಲ್ಲರಿಗೆ ಮಾದರಿಯಾಗಿದ್ದಾರೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಓದಿ:ನಿಮ್ಮ ಬಲಿದಾನ ನಮಗೆ ಪ್ರೇರಕ.. ಪುಲ್ವಾಮಾ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ..