ಶಿವಮೊಗ್ಗ: ಆರ್ಎಸ್ಎಸ್ ಕೇಂದ್ರ ಕಚೇರಿ ನಾಗ್ಪುರಕ್ಕೆ ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಯಾರ್ ಬೇಕಾದರೂ ಹೋಗಬಹುದು. ಹಾಗಾಗಿ ರಮೇಶ್ ಜಾರಕಿಹೊಳಿರವರು ನಾಗ್ಪುರದ ಆರ್ಎಸ್ಎಸ್ ಕಚೇರಿಗೆ ಹೋಗಿರುವ ವಿಚಾರಕ್ಕೆ ಅಷ್ಟೇನು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ಮಾತನಾಡಿದ ಅವರು, ನಾಗ್ಪುರದ ಆರ್ಎಸ್ಎಸ್ ಕಚೇರಿ ಇರುವುದೇ ಎಲ್ಲಾರೂ ಈ ಸಂಘಟನೆ ಸೇರಿಕೊಂಡು ದೇಶ ಉದ್ಧಾರ ಮಾಡಬೇಕೆಂಬ ಉದ್ದೇಶದಿಂದ. ಆರ್ಎಸ್ಎಸ್ ಭಾರತ ಮಾತ್ರವಲ್ಲ, ವಿಶ್ವದಲ್ಲಿಯೇ ಇದೆ. ಈ ದೇಶ, ಸಮಾಜಕ್ಕೆ ಒಳ್ಳೆಯದು ಬಯಸುವ ಯಾರು ಬೇಕಾದರೂ ಸಹ ಆರ್ಎಸ್ಎಸ್ ಕಚೇರಿಗೆ ಹೋಗಬಹುದು ಎಂದರು.
ಅರುಣ್ ಸಿಂಗ್ ವರದಿ ವಿಚಾರ:
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೈಕಮಾಂಡ್ ಗೆ ವರದಿ ನೀಡಿರುವ ವಿಚಾರದ ಕುರಿತು ನನಗೆ ಏನೂ ಗೂತ್ತಿಲ್ಲ. ಹಾಗೆಯೇ ಅವರು ಯಾವ ವಿಚಾರ ಪ್ರಸ್ತಾಪ ಮಾಡಿದರೂ ಅನ್ನೋದು ತಿಳಿದಿಲ್ಲ. ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ ಯಾವ ವಿಚಾರ ಪ್ರಸ್ತಾಪ ಮಾಡಿದರು ಅಂತ ಮಾಧ್ಯಮದವರಿಗೂ ಗೂತ್ತಿದೆ. ರಾಜ್ಯದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಎಲ್ಲಾ ಸಂಘಟನೆ ಜೊತೆ ಸೇರಿಕೊಂಡು ಕೋವಿಡ್ ಪರಿಹಾರ ಮಾಡುವಲ್ಲಿ ಶ್ರಮ ಹಾಕಿದ್ದೇವೆ. ಈ ಬಗ್ಗೆ ಅರುಣ್ ಸಿಂಗ್ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.