ಶಿವಮೊಗ್ಗ: ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ಪೂರೈಕೆ ಆಗುತ್ತಿದ್ದು, ಒಂದೆರಡು ದಿನಗಳಲ್ಲಿ 2500ಟನ್ ಯೂರಿಯಾ ಜಿಲ್ಲೆಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರೈತರಿಗೆ ಭರವಸೆ ನೀಡಿದರು.
ನ್ಯಾಷನಲ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಮುಂಬೈ ಸಂಸ್ಥೆಯಿಂದ 2500 ಟನ್ ಯೂರಿಯಾ ಒಂದೆರಡು ದಿನಗಳಲ್ಲಿ ಜಿಲ್ಲೆಗೆ ತಲುಪಲಿದೆ. ಮಂಡ್ಯ, ಹಾಸನ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ಸುಮಾರು 1000 ಟನ್ ಯೂರಿಯಾ ನಾಳೆ ಸಂಜೆ ಒಳಗಾಗಿ ಜಿಲ್ಲೆಗೆ ಪೂರೈಕೆಯಾಗಲಿದೆ. ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಯೂರಿಯಾ ಸರಬರಾಜು ಮಾಡಲಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಯೂರಿಯಾ ಪೂರೈಕೆ ಬಗ್ಗೆ ರೈತರಿಗೆ ಆತಂಕ ಬೇಡ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರಸಗೊಬ್ಬರ ಕೊರತೆ ಬಗ್ಗೆ ಯಾವುದೇ ಆತಂಕ ಬೇಡ. ಈ ಕುರಿತು ವದಂತಿಗಳಿಗೆ ಕಿವಿಗೊಡಬಾರದು. ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಅಲ್ಲದೇ ಶಿಕಾರಿಪುರದಲ್ಲಿರುವ ರಸಗೊಬ್ಬರ ವಿತರಣಾ ಕೇಂದ್ರ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿ ಲಭ್ಯವಿರುವ ಯೂರಿಯಾ ದಾಸ್ತಾನು ಮಾಹಿತಿಯನ್ನು ಪಡೆದರು. ಯೂರಿಯಾ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿಗಾವಹಿಸಿ ಕಠಿಣ ಕ್ರಮ ಜರುಗಿಸುವಂತೆ ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂಧರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ಉಪಸ್ಥಿತರಿದ್ದರು.