ಶಿವಮೊಗ್ಗ:ನವರಾತ್ರಿ ಹಬ್ಬದಲ್ಲಿ ಗೊಂಬೆ ಕೂರಿಸುವ ಪದ್ಧತಿ ವಿಶೇಷವಾಗಿದೆ. ಮನೆಮನೆಗಳಲ್ಲಿ ಬಣ್ಣಬಣ್ಣದ ಗೊಂಬೆಗಳನ್ನು ಕೂರಿಸುವ ಮಹಿಳೆಯರು ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಅದೇ ರೀತಿ ಶಿವಮೊಗ್ಗದ ಮನೆ ಮನೆಗಳಲ್ಲಿಯೂ ದಸರಾ ಗೊಂಬೆಗಳು ವಿಜೃಂಭಿಸುತ್ತಿವೆ.
ಶಿವಮೊಗ್ಗದ ಅಚ್ಚುತರಾವ್ ಬಡಾವಣೆಯ ಸಿತಾರ ಹಾಗೂ ದುರ್ಗಿಗುಡಿಯ ಎಲ್‌ಎಲ್‌ಆರ್ ರಸ್ತೆಯ ಪ್ರಸನ್ನ ರವರ ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡಲಾಗುತ್ತಿದೆ. ಅವರ ಮನೆಯಲ್ಲಿ ಕೂರಿಸಿರುವ ನೂರಾರು ಗೊಂಬೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಮೂರು ತಲೆಮಾರಿನಿಂದ ಸಿತಾರ ಅವರ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲಾಗುತ್ತಿದ್ದು, ಅವುಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ. ಈ ಬಾರಿಯೂ ದಶಾವತಾರ, ರಾಮ, ಕೃಷ್ಣ-ರುಕ್ಮಿಣಿ, ಮಹಿಷಾ ಮರ್ಧಿನಿ ಸೇರಿದಂತೆ ಹಲವು ತರಹೇವಾರಿ ವಿಶೇಷತೆಯುಳ್ಳ ಬೊಂಬೆಗಳನ್ನು ಜೋಡಿಸಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.