ಶಿವಮೊಗ್ಗ: ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದೆ. ಸಿಂದಗಿಯಲ್ಲಿ ಬಿಜೆಪಿ ಜಯಗಳಿಸಿದೆ. ಹಾನಗಲ್ನಲ್ಲಿ ಸಹ ಕಡಿಮೆ ಅಂತರದಲ್ಲಾದ್ರೂ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸವನ್ನು ಸಂಸದ ಬಿ.ವೈ.ರಾಘವೇಂದ್ರ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಭಾವಶಾಲಿಯಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತಿದೆ. ಸಿಂದಗಿಯಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ. ಹಾನಗಲ್ನಲ್ಲಿ ಪೈಪೋಟಿ ಇದೆ. ಅಲ್ಲಿ ಕೂಡ ಕಡಿಮೆ ಅಂತರದಿಂದ ಗೆಲ್ಲಬಹುದು ಎಂದರು.
ಬೈ ಎಲೆಕ್ಷನ್ ಫಲಿತಾಂಶದ ಕುರಿತಂತೆ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿರುವುದು.. ಪ್ರತಿಯೊಂದು ಚುನಾವಣೆಯೂ ನಮಗೆ ಹೊಸ ಸವಾಲಾಗಿರುತ್ತದೆ. ಕೊರತೆಗಳನ್ನು ಸರಿ ಮಾಡಿಕೊಂಡು ಹೋಗಲು ಅವಕಾಶವಿದೆ. ಬಿಜೆಪಿ ಅವಧಿಯಲ್ಲಿ 25 ಉಪ ಚುನಾವಣೆ ನಡೆದಿವೆ.
ಇದರಲ್ಲಿ ಈ ಎರಡು ಕ್ಷೇತ್ರದ ಫಲಿತಾಂಶ ಹೊರತುಪಡಿಸಿ 20 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಈ ರೀತಿ ಗೆಲ್ಲುವುದು ಸಾಮಾನ್ಯವಾದ ವಿಷಯವಲ್ಲ ಎಂದರು.
ತೈಲ ಬೆಲೆ ಇಳಿಕೆ ಕುರಿತು ಚರ್ಚೆ ನಡೆದಿದೆ. ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕೃತಿ ಉಳಿಸುವ ಕುರಿತು ಚರ್ಚೆ ನಡೆಸಿದ್ದಾರೆ.
2050ರ ವೇಳೆಗೆ ಪ್ರಕೃತಿಗೆ ಹಾನಿಕಾರಕವಾದ ಅಂಶಗಳನ್ನು ಸರಿ ಪಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಇರಬೇಕೆಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಗಳು ಸಹ ಪ್ರಯತ್ನ ನಡೆಸುತ್ತಿವೆ. ಬ್ಯಾಟರಿ ಚಾಲಿತ ವಾಹನಗಳು ಈಗ ಮಾರುಕಟ್ಟೆಗೆ ಬರುತ್ತಿವೆ ಎಂದರು.