ಮೈಸೂರು :ಆರ್ಥಿಕವಾಗಿ ಹಿಂದುಳಿದ ವರ್ಗದವರು ಉದ್ಯಮ ಸ್ಥಾಪಿಸಲು ಅನುವಾಗುವಂತೆ ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನಕ್ಕೆ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಗುರುವಾರ 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇ.75ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ.75ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ಅಲ್ಲದೇ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯದ ವಿದ್ಯಾರ್ಥಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಬ್ಯಾಂಕ್ ಲೋನ್, ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸುವವರೆಗೆ ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ನಿರಾಣಿ ಭರವಸೆ ನೀಡಿದರು. ಬೇರೆಯವರ ಕೈಕೆಳಗೆ ನೀವು ದುಡಿಯಬೇಕಿಲ್ಲ. ಛಲ ಬಿಡದೆ ಸಾಧಿಸಿದರೆ ನೀವೇ ಉದ್ಯಮ ಸ್ಥಾಪಿಸಿ ಇತರರಿಗೆ ಕೆಲಸ ಕೊಡಬಹುದು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ?, ಎಲ್ಲಿ ಮತ್ತು ಹೇಗೆ ಸಾಲ ಸೌಲಭ್ಯ ದೊರೆಯುತ್ತದೆ?, ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಿದರು.