ಕರ್ನಾಟಕ

karnataka

ETV Bharat / city

ನೈರುತ್ಯ ರೈಲ್ವೆ ವಿಭಾಗದಲ್ಲಿ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯುವ ಸೌಲಭ್ಯ

ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಪಡೆಯುವ ಸೌಲಭ್ಯವನ್ನು ಮೈಸೂರು ರೈಲ್ವೆ ನಿಲ್ದಾಣ ಸೇರಿದಂತೆ ನೈರುತ್ಯ ರೈಲ್ವೆ ವಿಭಾಗದ 10 ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದೆ.

Southwest brought  atvm machineTicket Facility
ನೈರುತ್ಯ ರೈಲ್ವೆ ವಿಭಾಗದಲ್ಲಿ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯುವ ಸೌಲಭ್ಯ ಜಾರಿ

By

Published : Feb 18, 2022, 11:44 AM IST

ಮೈಸೂರು:ಕ್ಯೂನಲ್ಲಿ ನಿಂತು ಹಣ ಪಾವತಿ ಮಾಡಿ ರೈಲ್ವೆ ಟಿಕೆಟ್ ಪಡೆಯುವ ವ್ಯವಸ್ಥೆಯ ಬದಲಿಗೆ ಈಗ ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಪಡೆಯುವ ಸೌಲಭ್ಯವನ್ನು ಮೈಸೂರು ರೈಲ್ವೆ ನಿಲ್ದಾಣ ಸೇರಿದಂತೆ ನೈರುತ್ಯ ರೈಲ್ವೆ ವಿಭಾಗದ 10 ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದೆ.

ಪ್ರಯಾಣಿಕರು ಡಿಜಿಟಲ್ ಪದ್ಧತಿಯ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಮೈಸೂರು ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವ ಸೌಲಭ್ಯವಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ತಿಳಿಸಿದರು.

ಈ ಮೊದಲು ಟಿಕೆಟ್‌ಗಳನ್ನು ಖರೀದಿಸಲು ಎಟಿವಿಎಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಾವತಿ ಆಯ್ಕೆಯನ್ನು ಮಾತ್ರ ಒದಗಿಸಲಾಗಿತ್ತು. ಈಗ, ನೈಋತ್ಯ ರೈಲ್ವೆಯ ಹಲವು ನಿಲ್ದಾಣಗಳಲ್ಲಿನ ಎಟಿವಿಎಂಗಳಲ್ಲಿ ಪೇಟಿಎಂ, ಫ್ರೀಚಾರ್ಜ್ ಮತ್ತು ಯುಪಿಐ ಕ್ಯೂಆರ್ ಕೋಡ್ ಆಧಾರಿತ ಪಾವತಿ ಸೌಲಭ್ಯವನ್ನು ಫೆಬ್ರವರಿ 10 ರಿಂದ ಪ್ರಾರಂಭಿಸಿದೆ. ಈಗ ಪ್ರಯಾಣಿಕರು ಎಟಿವಿಎಂಗಳಲ್ಲಿ ಒದಗಿಸಲಾದ ಈ ಹೊಸ ಪಾವತಿ ಆಯ್ಕೆಯನ್ನು ಬಳಸಿಕೊಂಡು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು, (ಸೀಸನ್) ಮಾಸಿಕ ಟಿಕೆಟ್‌ಗಳನ್ನು ನವೀಕರಿಸಬಹುದು. ಎಟಿವಿಎಂ ಸ್ಮಾರ್ಟ್ ಕಾರ್ಡ್‌ಗಳನ್ನು ಸಹ ರಿಚಾರ್ಜ್ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಮೊಬೈಲ್ ಯುಪಿಐ ಅಪ್ಲಿಕೇಶನ್ ಇರುವ ಫೋನ್ ಹೊಂದಿರುವ ಯಾವುದೇ ಪ್ರಯಾಣಿಕರು ಎಟಿವಿಎಂ ಯಂತ್ರಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಇದು ಬುಕ್ಕಿಂಗ್ ಕೌಂಟರ್‌ಗಳಲ್ಲಿ ಸರದಿಯಲ್ಲಿ ನಿಲ್ಲದೆ ಕಾಯ್ದಿರಿಸದ ಟಿಕೆಟ್‌ಗಳನ್ನು ಸುಲಭವಾಗಿ ಖರೀದಿಸಲು ಪ್ರಯಾಣಿಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಎಟಿವಿಎಂ ಯಂತ್ರಗಳನ್ನು ಮೈಸೂರು ವಿಭಾಗದ 10 ನಿಲ್ದಾಣಗಳಾದ ಮೈಸೂರು, ಹಾಸನ, ಶಿವಮೊಗ್ಗ ಟೌನ್, ದಾವಣಗೆರೆ, ಹಾವೇರಿ, ಅರಸೀಕೆರೆ, ಭದ್ರಾವತಿ, ಪಾಂಡವಪುರ, ಕಡೂರು ಮತ್ತು ಹರಿಹರ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದು, ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಮತ್ತು ಟಿಕೆಟ್ ಖರೀದಿಸಲು ದೀರ್ಘ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಈ ರೀತಿಯಾದ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನ ಮತ ಗಳಿಕೆಗೆ ಗುರಾಣಿ ಆಗಿರುವುದು ದುರದೃಷ್ಟಕರ: ಹೆಚ್‌ಡಿಕೆ

ABOUT THE AUTHOR

...view details