ಕರ್ನಾಟಕ

karnataka

ETV Bharat / city

ದಕ್ಷಿಣ ಪದವೀಧರ ಚುನಾವಣೆಯ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿ: ಸಿದ್ದರಾಮಯ್ಯ - ದಕ್ಷಿಣ ಪದವೀಧರ ಚುನಾವಣೆ

ದಕ್ಷಿಣ ಪದವೀಧರ ಚುನಾವಣೆ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ಹೀಗಾಗಿ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮಧು ಮಾದೇಗೌಡಗೆ ಮತ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Mysore
ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕ ಸಂಘದ ವಿದ್ಯಾರ್ಥಿಗಳ ಸಭೆ

By

Published : Jun 6, 2022, 7:19 AM IST

ಮೈಸೂರು:ದಕ್ಷಿಣ ಪದವೀಧರ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಖಾಸಗಿ ಹೋಟೆಲ್​​ನಲ್ಲಿ ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕ ಸಂಘದ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮಧು ಮಾದೇಗೌಡಗೆ ಮತ ನೀಡಿ ಎಂದರು. ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕೆಂದು ಕಾನೂನು ಮಾಡಿದ್ದು, 2013ರ ನನ್ನ ಅವಧಿಯಲ್ಲಿ ಆಗಿದೆ. ಅದರ ಹೊರತಾಗಿ ಬೇರೆಲ್ಲೂ ಇಂತಹ ಕೆಲಸ ಯಾರು ಮಾಡಿಲ್ಲ ಎಂದರು.

ಪ್ರತಾಪ್​​ ಸಿಂಹ ವಿರುದ್ಧ ಕಿಡಿ: ನನಗೇನೂ ಗೊತ್ತಿಲ್ಲದೇ 13 ಬಜೆಟ್ ಮಂಡಿಸಿದ್ದೇನೆ. ಇವನಿಗೇನು ಗೊತ್ತಿದೆ?. 19 ಲಕ್ಷ ಕೋಟಿ ತೆರಿಗೆಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಸೂಲಿ ಮಾಡಿದೆ. ಆದರೆ, ಕೇಂದ್ರ ರಾಜ್ಯಕ್ಕೆ 4.54 ಸಾವಿರ ಕೋಟಿ ನೀಡಿರುವುದಾಗಿ ಪ್ರಚಾರ ನೀಡಿದ್ದಾರೆ. ಹಾಗಾದರೆ ನಮ್ಮದೇ ತೆರಿಗೆ ಹಣ 14, 046 ಸಾವಿರ ಕೋಟಿ ರೂ. ಉಳಿಸಿಕೊಂಡಿದ್ದಾರೆ. ಆ ಹಣ ಅವರಪ್ಪನದ್ದಾ, ಮೋದಿಯವರದ್ದಾ ಎಂದು ಕಿಡಿಕಾರಿದರು.

ಧಾರ್ಮಿಕತೆ ಹೆಸರಿನಲ್ಲಿ ಹಿಂದುಳಿದ ಸಮುದಾಯವನ್ನು ಇಂದಿಗೂ ಗುಲಾಮಗಿರಿ ಮನಸ್ಥಿತಿಯಲ್ಲಿ ಇರಿಸಿಕೊಂಡಿದ್ದು, ಅದನ್ನು ಕಿತ್ತೆಸೆಯಬೇಕಿದೆ. ಈವರೆಗೆ 3 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗಿತ್ತು. ಇದು ಪ್ರತಾಪ್​​ ಸಿಂಹನಿಗೆ ಗೊತ್ತಾ?, ನಮಗೆ ಬಂದಿರುವುದು ಕೇವಲ 46 ಸಾವಿರ ಕೋಟಿ ರೂ. ಅಷ್ಟೇ. ಈ ಲೆಕ್ಕ ಕೊಡಲಿ, ಹೀಗೆ ಸುಮ್ಮನೆ ಸುಳ್ಳು ಹೇಳುತ್ತಾರೆ ಎಂದರು.

8 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ: ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ 37 ಲಕ್ಷ ಕೋಟಿ ರೂ. ದೇಶದ ಸಾಲವಿತ್ತು. ಈಗ 155 ಲಕ್ಷ ಕೋಟಿ ರೂ. ಸಾಲವನ್ನು ದೇಶದ ಮೇಲೆ ಮಾಡಲಾಗಿದೆ‌. ಬರೋಬ್ಬರಿ 102 ಲಕ್ಷ ಕೋಟಿ ಸಾಲವನ್ನು 8 ವರ್ಷದಲ್ಲಿ ನರೇಂದ್ರ ಮೋದಿ ಮಾಡಿದ್ದಾರೆ. ಪ್ರತಿಯೊಬ್ಬರ ಮೇಲೆ 1 ಲಕ್ಷದ 70 ಸಾವಿರ ಸಾಲ ಹೊರೆ ಮಾಡಿದ್ದಾರೆ. ಅಂತೆಯೇ 2018 ರಾಜ್ಯ ಸರ್ಕಾರ 2 ಲಕ್ಷದ 42 ಸಾವಿರ ಸಾಲವಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಲಕ್ಷದ 40 ಸಾವಿರ ಕೋಟಿ ರೂ.ಮಾಡಿದೆ‌. ಬರೋಬ್ಬರಿ ಅಂದಾಜು 3 ಲಕ್ಷ ಕೋಟಿ ರೂ. ಸಾಲ ಹೆಚ್ಚಾಗಿದೆ. ಇಂತಹವರ ಕೈಯಲ್ಲಿ ದೇಶ ಹಾಗೂ ರಾಜ್ಯ ಉಳಿಯುತ್ತದಯೇ ನೀವೇ ಹೇಳಿ ಎಂದರು.

ಮೈಸೂರು ವಿಶ್ವ ವಿದ್ಯಾನಿಲಯದ ಸಂಶೋಧಕ ಸಂಘದ ವಿದ್ಯಾರ್ಥಿಗಳ ಸಭೆ

ರಾಜಕೀಯಕ್ಕಾಗಿ ನಾನು ಬಿಜೆಪಿಯ ವಿರುದ್ಧ ಮಾತನಾಡಲ್ಲ.‌ ಆದರೆ, ಯಾರೇ ಆಗಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯಬೇಕು. ಸಂವಿಧಾನ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದು ಆಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ದೇಶಕ್ಕೆ ಕೆಟ್ಟದು ಆಗುತ್ತದೆ. ಆರ್​​ಎಸ್​​ಎಸ್ ಹಾಗೂ ಹಿಂದೂ ಮಹಾಸಭಾ ಅವರು ಯಾವತ್ತಿಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಒಪ್ಪಿಕೊಂಡಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅದಕ್ಕಾಗಿಯೇ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದರು.

ಒಟ್ಟು 14 ವರ್ಷ ಅಷ್ಟೇ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 1925ರಲ್ಲಿ ಹುಟ್ಟಿಕೊಂಡ ಆರ್​​ಎಸ್​​ಎಸ್ ಮುಖ್ಯಸ್ಥರು ಈವರೆಗೆ ಒಂದೇ ಸಮುದಾಯದವರಾಗಿದ್ದಾರೆ. ಅಂಬೇಡ್ಕರ್ ಇಲ್ಲದಿದ್ದರೆ ಸಂವಿಧಾನವೇ ಇರುತ್ತಿರಲಿಲ್ಲ. ಸಾಮಾಜಿಕ ಬದ್ಧತೆ, ಸಾಮಾಜಿಕ ನ್ಯಾಯವೇ ಇರುತ್ತಿರಲಿಲ್ಲ. ಒಂದು ಕ್ಷಣವೂ ಸಹ ಸಂವಿಧಾನ ಇಲ್ಲ ಎಂಬ ಕಲ್ಪನೆ ಮಾಡುವುದು ಅಸಾಧ್ಯ ಎಂದರು.

ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಅವರ ವಿರುದ್ಧ ಮೋದಿ ಯಾವುದೇ ಕ್ರಮ ಜರುಗಿಸಿಲ್ಲ. ಸಂವಿಧಾನ ಇಲ್ಲದಿದ್ದರೆ ನಾನು ಮುಖ್ಯ ಮಂತ್ರಿ ಆಗಲು ಆಗುತ್ತಿತ್ತಾ?, ಸಂವಿಧಾನ ಇದ್ದದ್ದರಿಂದಲೇ ನಾನು ಮುಖ್ಯಮಂತ್ರಿ ಆದೆ. ಸಂವಿಧಾನಕ್ಕೆ ಆಶಯಕ್ಕೆ ತೊಂದರೆಯಾದರೆ ತಳ ಸಮುದಾಯಕ್ಕೆ ತೊಂದರೆ ಆದಂತೆಯೇ ಆಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧ ಆಗಿರುವವರು ದೇಶದ್ರೋಹಿಗಳು ಎಂದಿದ್ದೇನೆ ಇದರಲ್ಲಿ ತಪ್ಪೇನಿದೆ? ಎಂದರು.

ಸಿದ್ದರಾಮಯ್ಯ ನಾಯಕತ್ವಕ್ಕಾಗಿ ಮತಹಾಕಿ: ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಆಡಳಿತ ಅನಿವಾರ್ಯ ಎಂಬುದನ್ನು ಮೈ ಮರೆಯದೇ ಚುನಾವಣೆಯಲ್ಲಿ ಬೆಂಬಲಿಸಬೇಕಿದೆ. ಜಾತ್ಯತೀತ ನಿಲುವಿನ ಮೂಲಕ ಹಿಂದುಳಿದ ಸಮುದಾಯ, ರೈತ ಹಾಗೂ ಕಾರ್ಮಿಕ ಸೇರಿ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

ಹೀಗಾಗಿ ವಿಶ್ವ ವಿದ್ಯಾನಿಲಯದ 2 ಸಾವಿರ ಮಂದಿ ಮತದಾರರಿಗೂ ಮನವೊಲಿಸುವ ಕೆಲಸ ನಿಮ್ಮಿಂದ ಆಗಬೇಕಿದೆ. ಮಧು ಮಾದೇಗೌಡ ಅವರು ಹಿರಿಯ ಮುತ್ಸದ್ಧಿ ಮಾದೇಗೌಡ ಅವರ ಪುತ್ರರಾಗಿದ್ದಾರೆ. ಒಬ್ಬ ಯೋಗ್ಯ ಅಭ್ಯರ್ಥಿಯಾಗಿರುವ ಕಾರಣದಿಂದಲೇ ಅವರಿಗೆ ಟಿಕೆಟ್ ನೀಡಿದ್ದು. ನೀವೇ ಅಭ್ಯರ್ಥಿ ಎಂದು ಭಾವಿಸಿ ಸಂಘಟನಾತ್ಮಕವಾಗಿ ಮಧು ಮಾದೇಗೌಡರ ಪರವಾಗಿ ಕೆಲಸ ಮಾಡಿ ಎಂದು ಹೇಳಿದರು.

ಇದನ್ನೂ ಓದಿ:8 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ 1.29 ಲಕ್ಷ ಕೋಟಿ ಅನುದಾನ ಬಂದಿದೆ: ಪ್ರತಾಪ್ ಸಿಂಹ

ABOUT THE AUTHOR

...view details