ಮೈಸೂರು: ರೈತರ ಹಿತ ಕಾಪಾಡುವಲ್ಲಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಕಟ್ಟೆಮಳಲವಾಡಿ ತಂಬಾಕು ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.
ಬುಧವಾರ ಸಂಜೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಆಗಮಿಸಿ, ಫ್ಲಾಟ್ ಫಾರಂ ನಂ.2 ಮತ್ತು 3 ರ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ತಂಬಾಕು ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ಈ ವೇಳೆ ಮಾತನಾಡಿದ ಶಾಸಕ ಹೆಚ್.ಪಿ.ಮಂಜುನಾಥ್, ಮಾರುಕಟ್ಟೆ ಆರಂಭಕ್ಕೂ ಮುನ್ನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ತಂಬಾಕು ಹರಾಜು ಅಧೀಕ್ಷಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಲ್ಲದೇ, ಹರಾಜು ಪ್ರಕ್ರಿಯೆ ಆರಂಭವಾದ ಮೂರನೇ ದಿನಕ್ಕೆ ಬೆಲೆ ಕುಸಿದಿದ್ದು, ಸೂಕ್ತ ಬೆಲೆ ರೈತರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ಕಚೇರಿಗೆ ಬೀಗ ಹಾಕಿರುವ ಕುರಿತು ಮಾಹಿತಿ ಪಡೆದ ತಂಬಾಕು ಮಂಡಳಿಯ ಆರ್ಎಂಒ ಮಂಜುನಾಥ್, ಅಸಿಸ್ಟೆಂಟ್ ಮ್ಯಾನೇಜರ್ ಹಸೀನಾ ತಾಜ್, ತಡರಾತ್ರಿ ಮಾರುಕಟ್ಟೆಗೆ ಆಗಮಿಸಿ, ಧರಣಿ ನಿರತ ಶಾಸಕ ಮಂಜುನಾಥ್ ಅವರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರು ನಾಲ್ಕು ದಿನಗಳೊಳಗಾಗಿ ತಂಬಾಕು ಬೆಳೆಗಾರರ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮಧ್ಯರಾತ್ರಿ ಪ್ರತಿಭಟನೆ ವಾಪಸ್ ಪಡೆದರು.