ಉತ್ತರಕನ್ನಡ/ಮೈಸೂರು/ಕೊಪ್ಪಳ :ಹಿಜಾಬ್ ವಿವಾದದ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ಪಿಯು, ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿವೆ.
ಮುಂಜಾಗ್ರತಾ ಕ್ರಮವಾಗಿ ಆಯಾ ಜಿಲ್ಲೆಗಳಲ್ಲಿ ಎಲ್ಲಾ ಕಾಲೇಜುಗಳ ಸುತ್ತಮುತ್ತ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಸಮವಸ್ತ್ರ ನೀತಿ ಕಡ್ಡಾಯ ಪಾಲನೆಗೆ ಆದೇಶವಿದ್ದರೂ ಕೂಡ ಅಲ್ಲಲ್ಲಿ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ಬಂದಿದ್ದಾರೆ. ಹಿಜಾಬ್ಗಾಗಿ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರವಾರ (ಉತ್ತರಕನ್ನಡ):ನ್ಯಾಯಾಲಯದ ಮಧ್ಯಂತರ ಆದೇಶದ ನಡುವೆಯೂ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ ಘಟನೆ ಕಾರವಾರ ನಗರದ ದಿವೆಕರ್ ಕಾಮರ್ಸ್ ಕಾಲೇಜಿನಲ್ಲಿ ನಡೆದಿದೆ.
ಇಂದಿನಿಂದ ತರಗತಿ ಆರಂಭವಾದ ಹಿನ್ನೆಲೆಯಲ್ಲಿ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳು ಹಿಜಾಬ್, ಬುರ್ಖಾ ಧರಿಸಿ ಆಗಮಿಸಿದ್ದರು. ತರಗತಿ ತೆರಳುವ ವೇಳೆ ಶಿಕ್ಷಕರು ನ್ಯಾಯಾಲಯದ ಮಧ್ಯಂತರ ಆದೇಶದ ಬಗ್ಗೆ ತಿಳಿ ಹೇಳುತ್ತಿದ್ದರು. ಆದರೆ ಈ ವೇಳೆ ಕ್ಯಾಮರಾ ಕಾಣುತ್ತಿದ್ದಂತೆ ವಿದ್ಯಾರ್ಥಿಗಳು ಕಾಲೇಜು ಒಳಗಡೆ ಓಡಿದ್ದಾರೆ.
6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಖಾ ಧರಿಸಿ ಆಗಮಿಸಿದ್ದರು. ಹಾಗಾಗಿ, ವಿದ್ಯಾರ್ಥಿನಿಯರ ಮನವೊಲಿಸಿ ಪಾಲಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಸೂಚಿಸಿದ್ದಾರೆ. ಇನ್ನು ಅಹಿತಕರ ಘಟನೆ ನಡೆಯದಂತೆ ಕಾಲೇಜುಗಳ ಮುಂದೆ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ.
ಮೈಸೂರು :ಕಾಲೇಜುಗಳ ಸುತ್ತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜುಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ.