ಮೈಸೂರು: ನವರಾತ್ರಿಯ ಸಂದರ್ಭದಲ್ಲಿ ಮಾತ್ರ ರತ್ನಖಚಿತ ಸಿಂಹಾಸನಕ್ಕೆ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ಪೂಜೆಯ ಸ್ವರೂಪ ಹೇಗಿರುತ್ತದೆ? ಎಂಬೆಲ್ಲಾ ವಿಚಾರಗಳ ಬಗ್ಗೆ ಸಂಕ್ಷಿಪ್ತವಾಗಿ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಟಿವಿ ಭಾರತಕ್ಕೆ ವಿವರಿಸಿದರು.
ಈಟಿವಿ ಭಾರತಕ್ಕೆ ರತ್ನ ಖಚಿತ ಸಿಂಹಾಸನ ಇತಿಹಾಸ ತಿಳಿಸಿದ ಯದುವೀರ್... ನವರಾತ್ರಿಗೆ ಒಂದು ತಿಂಗಳ ಕಾಲ ಮುನ್ನ ಅರಮನೆಯ ನೆಲ ಮಾಳಿಗೆಯಲ್ಲಿ ಭದ್ರವಾಗಿಡಲಾದ ಈ ಸಿಂಹಾಸನವನ್ನು ದರ್ಬಾರ್ ಹಾಲ್‌ನಲ್ಲಿ ತಂದು ಜೋಡಿಸಿಟ್ಟಿರುತ್ತಾರೆ. ಆ ನಂತರ ನವರಾತ್ರಿಯ ಮೊದಲ ದಿನ ಬೆಳಗ್ಗೆ ಈ ಭವ್ಯ ಆಸನಕ್ಕೆ ಪೂಜೆ ಸಲ್ಲಿಸಿ, ಸಿಂಹಾಸನ ಜೋಡಣೆಯಾಗುತ್ತದೆ. ಆಗ ಇದು ಅತ್ಯಂತ ಆಕರ್ಷಕ ಸಿಂಹಾಸನವಾಗಿ ಅದಕ್ಕೆ ದೈವಿ ಶಕ್ತಿ ಬರುತ್ತದೆ.
ನವರಾತ್ರಿ ಮೊದಲ ದಿನ ಸಿಂಹಾಸನ ಜೋಡಣೆಯಾದ ನಂತರ ಸಿಂಹಾಸನಕ್ಕೆ ಮಹಾರಾಜರು ಪೂಜೆ ಸಲ್ಲಿಸಿ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸುತ್ತಾರೆ. ಬಳಿಕ ಸಿಂಹಾಸನವನ್ನು ವಿಸರ್ಜನೆ ಮಾಡಿ ವಿಜಯದಶಮಿ ಆಚರಿಸುವ ಪದ್ಧತಿ ಅರಮನೆಯಲ್ಲಿ ಈಗಲೂ ನಡೆದುಕೊಂಡು ಬಂದಿದೆ ಎಂದು ಯದುವೀರ್ ಹೇಳುತ್ತಾರೆ.
ಸಿಂಹಾಸನದ ಇತಿಹಾಸ:
ಸಿಂಹಾಸನದ ಇತಿಹಾಸ ನಮಗೆ ತಿಳಿದಿರುವ ಹಾಗೆ, ಈ ಸಿಂಹಾಸನ ಪರಿಷತ್ ಕಾಲದ ಯುಧಿಷ್ಠಿರನ ಮೊಮ್ಮಗ ಕಾಲದಿಂದ ಬೇರೆ ಬೇರೆ ರಾಜರುಗಳಿಗೆ ಉಪಯೋಗ ಆಗಿದೆ. ಕಪಿಲಾರೆ ವಿಜಯನಗರದಲ್ಲಿ ಉಪಯೋಗ ಆಗಿ, ನಂತರ ಮೊಹಮ್ಮದ್ ಬಿನ್ ತುಘಲಕ್ ಸಮಯದ ಯುದ್ದದಲ್ಲಿ ಈ ಸಿಂಹಾಸನವನ್ನು ನೆಲ ಮಾಳಿಗೆಯಲ್ಲಿ ಬಚ್ಚಿಟ್ಟು ಆ ಸಮಯಕ್ಕೆ 8 ವರ್ಷದ ನಂತರ ಹಕ್ಕ -ಬುಕ್ಕ ಸಹೋದರರು ಬರುತ್ತಾರೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿ, ಸಿಂಹಾಸನ ಎಲ್ಲಿ ಬಚ್ಚಿಟ್ಟಿದ್ದಾರೆ ಎಂದು ಅವರ ಕಾಲದಲ್ಲಿ ವಿದ್ಯಾರಣ್ಯ ಎಂಬುವವರಿಗೆ ಗೊತ್ತಿರುತ್ತದೆ. ಸಿಂಹಾಸನವನ್ನು ಮತ್ತೆ ಹೊರತೆಗೆದು ಧರ್ಮ ಸ್ಥಾಪನೆ ಮಾಡಿ ಮುಂದುವರೆಯುತ್ತಾರೆ.
ವಿಜಯನಗರ ಕಾಲದಲ್ಲಿ ಸುಮಾರು 274 ವರ್ಷಗಳ ಕಾಲ ಅವರ ಜೊತೆ ಇರುತ್ತದೆ. ಈ ಸಿಂಹಾಸನ ನಂತರ ಪಾಢ್ಯ ದಿನ ರಾಜರು ಸಿಂಹಾಸನದ ಮೇಲೆ ಕುಳಿತು ಈ ಸಂಪ್ರದಾಯ ಮುಂದುವರೆಸುತ್ತಾರೆ.
ನವರಾತ್ರಿ 9 ದಿನದ ಸಮಯದಲ್ಲಿ ಇದರ ಉಪಯೋಗ ಆಗುತ್ತದೆ. ವಿಗ್ರಹವನ್ನು ಕೆತ್ತಿದ್ದ ನಂತರ ಅದಕ್ಕೆ ಪ್ರಾಣ ಬರುವುದು. ಪ್ರಾಣ ಪ್ರತಿಷ್ಠಾಪನೆ ಆದ ನಂತರ ಅದೇ ರೀತಿ ನವರಾತ್ರಿಯ ಮೊದಲನೇ ದಿನ ಅದಕ್ಕೆ ಪ್ರಾಣ ಕೊಟ್ಟು ಆಗ ಅದು ಸಿಂಹಾಸನ ಆಗುತ್ತದೆ. ಅದಕ್ಕೂ ಮುಂಚೆ ಅದು ಆಸನ ಆಗಿರುತ್ತದೆ. 9 ದಿನ ಆದ ನಂತರ ವಿಸರ್ಜನೆಯೂ ಆಗುತ್ತದೆ. ಮಹಾಲಯ ಅಮಾವಾಸ್ಯೆ ಆದ ಒಂದು ದಿನದ ನಂತರ ಸಿಂಹಾಸನ ಜೋಡಣೆ ಆಗುತ್ತದೆ. ಈ ಸಂಪ್ರದಾಯ ಹಿಂದೆ ಯಾವ ರೀತಿ ನಡೆಯುತ್ತಿತ್ತು, ಈಗಲೂ ಅದೇ ರೀತಿ ಅರಮನೆಯಲ್ಲಿ ಆಚರಣೆ ನಡೆಯುತ್ತದೆ ಎಂದು ಈಟಿವಿ ಭಾರತಗೆ ನೀಡಿದ ಸಂದರ್ಶನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದರು.