ಮೈಸೂರು:ಸೈಯದ್ ಇಸಾಕ್ ಕನ್ನಡ ಗ್ರಂಥಾಲಯ ಬೆಂಕಿ ಪ್ರಕರಣಕ್ಕೆ ಬೀಡಿ ಹಚ್ಚಿಕೊಂಡು ಬಿಸಾಡಿದ ಬೆಂಕಿ ಕಡ್ಡಿ ಕಾರಣ ಎಂದು ನಗರ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ ಸಿಸಿಟಿವಿ ದೃಶ್ಯದ ಸಮೇತ ವಿವರಿಸಿದ್ದಾರೆ.
ಏ. 8ರಂದು ಉದಯಗಿರಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನಡ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಇಸಾಕ್ ಎಂಬುವರು ಪ್ರಕರಣವೊಂದನ್ನು ದಾಖಲಿಸಿದ್ದು, ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಸ್ಥಳೀಯವಾಗಿದ್ದ ಒಂದು ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅಂದು ನಡೆದಿದ್ದು...
ಅಂದು ರಾತ್ರಿ ಸೈಯದ್ ನಾಜೀರ್ ಎಂಬುವನು ವಿಪರೀತ ಮದ್ಯಪಾನ ಮಾಡಿ ಮನೆಯಿಂದ ಗಲಾಟೆ ಮಾಡಿಕೊಂಡು ಬಂದು ಈ ಗ್ರಂಥಾಲಯಕ್ಕೆ ಹೊಂದಿಕೊಂಡಿದ್ದ ಸೋಫಾ ರಿಪೇರಿ ಅಂಗಡಿಯ ಬಳಿ ಕುಳಿತಿದ್ದಾನೆ. ಬಳಿಕ ಬೀಡಿ ಸೇದಿ ಬೆಂಕಿ ಕಡ್ಡಿಯನ್ನು ಪಕ್ಕಕ್ಕೆ ಹಾಕಿದ್ದ. ಅದರಲಿದ್ದ ಬೆಂಕಿ ನಿಧಾನವಾಗಿ ಸೋಫಾ ಅಂಗಡಿಯನ್ನು ಸುಟ್ಟು ಹಾಕಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಇದನ್ನು ನೋಡಿ ಬೆಂಕಿಯನ್ನು ನಂದಿಸಿದ್ದರು.
ಆದರೆ ಬೆಂಕಿ ಸಂಪೂರ್ಣವಾಗಿ ನಂದದೆ ಇರುವ ಕಾರಣ ಮಧ್ಯರಾತ್ರಿ ಸುಮಾರು 2.40ರ ಸಮಯದಲ್ಲಿ ಆ ಬೆಂಕಿ ಮತ್ತೆ ಪಕ್ಕದಲ್ಲಿದ್ದ ಗ್ರಂಥಾಲಯವನ್ನು ಸುಟ್ಟು ಹಾಕಿದೆ. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಇದ್ದಕ್ಕೆ ಸಂಬಂಧಿಸಿದ ಆರೋಪಿ ಸೈಯದ್ ನಾಜೀರ್ನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
ಕೋವಿಡ್ ಮಾರ್ಗಸೂಚಿಯನ್ನು ಸಾರ್ವಜನಿಕರು ಪಾಲಿಸಬೇಕೆಂದು ಈಗಾಗಲೇ ಸರ್ಕಾರ ಕೋವಿಡ್ ಗೈಡ್ಲೈನ್ಸ್ ಪ್ರಕಟಿಸಿದ್ದು, ಅದರಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ನಗರ ಪೊಲೀಸ್ ಕಮೀಷನರ್, ಮೈಸೂರು ನಗರದ ಎಲ್ಲಾ ಪೊಲೀಸರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ 15 ಜನ ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.