ಧಾರವಾಡ:ನಗರದ ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಸಂಘದ ವತಿಯಿಂದ ಜಿಲ್ಲಾ ದಂಡಾಧಿಕಾರಿ ವರದಿ ಬಹಿರಂಗಗೊಳಿಸಲು ಆಗ್ರಹಿಸಿ ನಾಳೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣ ನಡೆದು ನಾಳೆಗೆ ಎರಡು ವರ್ಷ ಪೂರೈಸುತ್ತದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಸರ್ಕಾರದ ನೀತಿ ಖಂಡಿಸಿ ಕಟ್ಟಡ ಬಿದ್ದ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಒಂದು ವರ್ಷದ ಹಿಂದೆ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಕೋಶ ಇಲಾಖೆ ಅವರಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿ ವರದಿ ಸಲ್ಲಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಈ ವಿಷಯದ ಕುರಿತು ಮಾತನಾಡುತ್ತಿಲ್ಲ. ಒಂದು ಪ್ರಶ್ನೆಯನ್ನು ಸಹ ಅಧಿವೇಶನದಲ್ಲಿ ಮಾಡಿಲ್ಲ. ಕಟ್ಟಡದ ಮಾಲೀಕರ ಪರವಾಗಿ ನಿಂತಿದ್ದಾರೆ ಎಂಬ ಅನುಮಾನ ಬರುತ್ತಿದೆ. ಮೃತ ಕುಟುಂಬದ ಬಗ್ಗೆ ಕನಿಕರವಿಲ್ಲ ಎಂದು ಆರೋಪಿಸಿದರು.
ಈ ಕಟ್ಟಡ ದುರಂತದಲ್ಲಿ 19 ಜನ ಮೃತಪಟ್ಟಿದ್ದರು. 57 ಜನ ಗಂಭೀರ ಗಾಯಾಳುಗಳಾಗಿದ್ದರು. ಸರ್ಕಾರ ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸುತ್ತಿಲ್ಲ. ಮೃತರಿಗೆ ಸರಿಯಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.