ಮೈಸೂರು: ಮುಡಾ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿನ ಮಾಜಿ, ಹಾಲಿ ಸೈನಿಕರಿಗೆ ರಿಯಾಯಿತಿ ನೀಡಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು. ಮುಡಾ ಕಚೇರಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಡಾವಣೆ ಒಂದು ನಿವೇಶನ ಸೀಮಿತವಾದಂತೆ 2011ರ ಕರ್ನಾಟಕ ಮುನ್ಸಿಪಾಲಿಟಿ ಕಾಯಿದೆ ಅನ್ವಯ ಆಸ್ತಿ ತೆರಿಗೆಯಲ್ಲಿ ಶೇ. 50 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮುಡಾದಿಂದ ಅನುಮೋದನೆಯಾಗಿರುವ ಖಾಸಗಿ ಬಡಾವಣೆಗಳಿಗೆ ಕುಡಿವ ನೀರನ್ನು ಕಬಿನಿ ಮೂಲದಿಂದ ಒದಗಿಸಲು ಅಗತ್ಯವಿರುವ 150 ಕೋಟಿ ರೂ.ಗಳನ್ನು ಪ್ರಾಧಿಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ಮುಂದಿನ 50 ವರ್ಷಗಳಿಗೆ ನಗರದ 50 ಸಾವಿರ ಮನೆಗಳಿಗೆ ವಾರದ ಏಳು ದಿನವೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
2025ರ ಅಂತ್ಯಕ್ಕೆ ನಗರ ಪಾಲಿಕೆ ವ್ಯಾಪ್ತಿಗೆ 236 ಎಂಎಲ್‌ಡಿ, ಮುಡಾ ವ್ಯಾಪ್ತಿ ಬಡಾವಣೆಗೆ 138.40, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಡಾವಣೆಗಳಿಗೆ 120 ಸೇರಿ ಒಟ್ಟು 494 ಎಂಎಲ್‌ಡಿ ನೀರು ಅವಶ್ಯವಿರುತ್ತದೆ. ಬಿದರಗೂಡಿನ ಜಾಕ್‌ವೆಲ್‌ನಿಂದ 180 ಎಂಎಲ್‌ಡಿ ನೀರು ಸರಬರಾಜು ಮಾಡಲು ಪೈಪ್‌ಪೈಲ್ ಆಳವಡಿಸಲಾಗಿದೆ. ಸದ್ಯಕ್ಕೆ 60 ಎಂಎಲ್‌ಡಿ ನೀರನ್ನು ಪ್ರಾಧಿಕಾರದಿಂದ ಪಡೆಯಲಾಗುತ್ತಿದೆ. 180 ಎಂಎಲ್‌ಡಿ ಉನ್ನತೀಕರಿಸಲು 150 ಕೋಟಿ ರೂ. ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.