ಮೈಸೂರು: ನನ್ನನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಕ್ಷದ ನಾಯಕರಿಗೆ ಹಾಗು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದೆ. ಈಗ ಆರೋಪದಿಂದ ಮುಕ್ತನಾಗಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ಇಂದು ನಾಡದೇವತೆ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂದು ನನಗೆ ಮೊದಲೇ ಗೊತ್ತಿತ್ತು. ಈಗ ತನಿಖೆಯಿಂದ ಆರೋಪ ಮುಕ್ತನಾಗಿದ್ದೇನೆ, ಪಕ್ಷಕ್ಕೆ ಇದ್ದ ಮುಜುಗರ ನಿವಾರಣೆ ಆಗಿದೆ ಎಂದರು.
ಬಿ ರಿಪೋರ್ಟ್ ಕುರಿತು ಕಾಂಗ್ರೆಸ್ ಟೀಕೆ ಮಾಡುತ್ತಿರುವುದು ಬೇಸರ ತರಿಸುತ್ತಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಈ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತು. ಆದರೂ, ಕಾನೂನು ಪಂಡಿತರಾದ ಸಿದ್ದರಾಮಯ್ಯನವರು ಬಿ-ರಿಪೋರ್ಟ್ ಬಗ್ಗೆ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಭ್ರಷ್ಟಾಚಾರ ಬಯಲು: ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟಾಚಾರ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಕಾಂಗ್ರೆಸ್ಸಿನವರು ಬಿಜೆಪಿ ಸರ್ಕಾರದ ಮೇಲೆ 40% ಲಂಚ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಯಾವುದೇ ಸಚಿವರ ಮೇಲೆ ಲಂಚದ ಆರೋಪ ಇರುವುದನ್ನು ಕಾಂಗ್ರೆಸ್ ತೋರಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಜಾತಿ ಪಟ್ಟ ಅಂಟಿಸುತ್ತಿದ್ದಾರೆ. ನಾನು ಸಿಎಂ ಆಗಲು ಸಮುದಾಯ ನನ್ನ ಬೆನ್ನಿಗೆ ಬರಬೇಕೆಂದು ಡಿಕೆಶಿ ಹೇಳಿದ್ದು, ಅವರು ಜಾತಿವಾದಿಗಳಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಕುರುಬ ನಾಯಕ ಎಂದು ಹೇಳುವ ಮೂಲಕ ಜಾತಿವಾದಿಯಾಗಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೆಸ್ಗೆ ಜಾತಿಯ ಕೆಸರು ಅಂಟಿಸುತ್ತಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಹರಿಪ್ರಸಾದ್ ಅವರನ್ನು ಈ ವಿಚಾರದಲ್ಲಿ ನಾನು ಅಭಿನಂದಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ:ಚಿಕ್ಕ ವಯಸ್ಸಿನಲ್ಲೇ ಸಂತೋಷ್ ಅವರ ಪತ್ನಿ ವಿಧವೆಯಾದರು ಎನ್ನುವ ನೋವಿದೆ: ಕೆ.ಎಸ್. ಈಶ್ವರಪ್ಪ