ಮೈಸೂರು: ಆರ್ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ಬಾರ್ ಕಟ್ಟಡ ಅಕ್ರಮವಾಗಿದೆ ಎಂದು ಹೆದರಿಸಿ ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಮೈಸೂರಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಧ್ಯಮಗೋಷ್ಟಿಯಲ್ಲಿ ಪ್ರಕರಣ ವಿವರಿಸುತ್ತಿರುವ ದೂರುದಾರ ರಾಜೇಶ್ ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಕಟ್ಟಡ ಮಾಲೀಕ ಪುಟ್ಟನರಸಯ್ಯ ಪುತ್ರ ರಾಜೇಶ್ ಮಾತನಾಡಿದರು. ಸಾಮಾಜಿಕ ಹಾಗೂ ಆರ್ಟಿಐ ಕಾರ್ಯಕರ್ತ ಗಂಗರಾಜು ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ದೇವರಾಜ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕ ಪುಟ್ಟನರಸಯ್ಯ (ರಾಜೇಶ್ ತಂದೆ)ರಿಂದ ದೂರು ದಾಖಲಾಗಿದೆ ಎಂದರು.
ಇದೇ ವೇಳೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿ, ಗಂಗರಾಜು 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.
ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರ್ಟಿಐ ಕಾರ್ಯಕರ್ತ ಮಾತನಾಡಿರುವ ವಿಡಿಯೋ ಪ್ರಕರಣದ ವಿವರ:
ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಬಾರ್ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಅಲ್ಲದೆ ಪುಟ್ಟನರಸಯ್ಯ ಅವರ ಹಿರಿಯ ಪುತ್ರ ಮಹೇಶ್ ಎಂಬುವವರಿಗೆ ಕರೆ ಮಾಡಿ ದೂರನ್ನು ವಾಪಸ್ ಪಡೆಯಬೇಕೆಂದರೆ 5 ಲಕ್ಷ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದಕ್ಕೆ ಹೆದರಿದ ಪುಟ್ಟನರಸಯ್ಯ ಈಗಾಗಲೇ 25 ಸಾವಿರ ರೂ. ಹಣ ನೀಡಿದ್ದು, ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಗರ ಪಾಲಿಕೆ ಹಾಗೂ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.