ಮೈಸೂರು: ಪ್ರಧಾನಿ ಮೋದಿ ಬರುವ ಮಾರ್ಗದಲ್ಲಿ ರೈತ ಮುಖಂಡರು ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾಡಿ ವಿನೂತನವಾಗಿ ಪ್ರತಿಭಟಿಸಿದರು. ಮೈಸೂರು ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪುತ್ಥಳಿ ಮುಂದೆ ಜಮಾಯಿಸಿದ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರು ತರಕಾರಿ, ದವಸ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮೋದಿ ಪ್ರಧಾನಿಯಾಗುವ ಮುನ್ನ ನಾನು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇನೆ ಎಂಬ ಭರವಸೆ ನೀಡಿದ್ದರು. ಅಲ್ಲದೇ, ರೈತರ ಆದಾಯವನ್ನು ದ್ವಿಗುಣಗೊಳಿಸುವುವುದಾಗಿ ಹೇಳಿದ್ದರು. ಇವೆಲ್ಲ ಯೋಜನೆಗಳು ಜಾರಿಯಾಯಿತೇ? ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಬಂದು ಹೋಗುವ ಕಾರ್ಯಕ್ರಮಕ್ಕೆ 12 ಕೋಟಿ ವೆಚ್ಚವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಷ್ಟೊಂದು ಖರ್ಚು ಮಾಡಿ ಮೈಸೂರಿಗೆ ಬರುವ ಮೋದಿ, ದೇಶದಲ್ಲಿ ರೈತರ ಉಳಿವಿಗಾಗಿ ಬೇಕಾದ ಕಾನೂನು ಮಾಡದಿರುವುದು ಹಾಸ್ಯಾಸ್ಪದವಾಗಿದೆ. ಉದ್ಯಮಿಗಳಿಗೆ ನೂರಾರು ಕೋಟಿ ಬ್ಯಾಂಕ್‍ಗಳಿಂದ ಸಾಲ ನೀಡಲಾಗುತ್ತದೆ. ಆದರೆ, ರೈತರು ಸಾಲ ಕೇಳಿದರೆ ಹಣ ನೀಡಲು ಸತಾಯಿಸುತ್ತಾರೆ. ರೈತರನ್ನ ಬ್ಯಾಂಕ್‍ಗಳು ಕೆಟ್ಟ ರೀತಿಯಲ್ಲಿ ನೋಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತನಾಡುತ್ತಿಲ್ಲ. ಫಲಾನುಭವಿಗಳ ಜೊತೆ ಚರ್ಚೆ ಮಾಡಲು ಬಿಜೆಪಿ ಅವರು ಕರೆದಿದ್ದಾರೆ. ಆದರೆ ನಮ್ಮನ್ನು ಕರೆದಿಲ್ಲ. ನಮ್ಮನ್ನು ಕರೆಯಲಿ, ನಾವು ಚರ್ಚೆ ಮಾಡುತ್ತೇವೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ : ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್