ಮೈಸೂರು: ಕಂದಾಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ, ದಾಖಲೆ ನೀಡಿ ಜಮೀನನ್ನು ಲಪಟಾಯಿಸಲು ಪ್ರಯತ್ನಿಸಿರುವ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಮಂದಿ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಯಪುರ ಹೋಬಳಿಯ ಡಿ. ಸಾಲುಂಡಿ ಗ್ರಾಮದ ಕೆ.ಸಿ. ಮಾಲೇಗೌಡ ಎನ್ನುವವರು ದೂರು ನೀಡಿದ ಹಿನ್ನೆಲೆ, ಅದೇ ಗ್ರಾಮದ ದಿವಂಗತ ಕರೀಗೌಡರ ಪತ್ನಿ ಕಾಳಮ್ಮ, ಮಕ್ಕಳಾದ ಶಂಕರೇಗೌಡ, ಬಸವೇಗೌಡ, ಬಸಪ್ಪ, ಶಿವಮ್ಮ, ಮಾಲೇಗೌಡ ಹಾಗೂ ಇವರಿಗೆ ಸಹಕರಿಸಿದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಬಿ. ಸುರೇಶ್ ಹಾಗೂ ಬಿ. ಪರಶಿವಮೂರ್ತಿ ವಿರುದ್ಧ ಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ
ಮಾಲೇಗೌಡ ಅಲಿಯಾಸ್ ಕಿವುಡಗಾಳಮ್ಮನ ಮಾಲೇಗೌಡ ಕುಟುಂಬದವರಾದ ಕಾಳಮ್ಮ ಮತ್ತು ಮಕ್ಕಳು, ನನ್ನ ತಂದೆ ದಿವಂಗತ ಕಾಳಚಿಕ್ಕೇಗೌಡ ಹಾಗೂ ಚಿಕ್ಕಪ್ಪ ದಿವಂಗತ ರಾಮೇಗೌಡರ ಕುಟುಂಬದವರೆಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಜಯಪುರ ಗ್ರಾಮದ ಸರ್ವೇ ನಂ. 36/2 ರ ಎಕರೆ 12 ಗುಂಟೆ ಜಮೀನಿನ ಖಾತೆಯನ್ನು ಜಂಟಿ ಖಾತೆಯಾಗಿ ಬದಲಾಯಿಸಿಕೊಂಡು ಮೋಸ ಮಾಡಲು ಯತ್ನಿಸಿದ್ದಾರೆ.
ಇವರ ಕೃತ್ಯಕ್ಕೆ ಪೊಲೀಸ್ ಸಿಬ್ಬಂದಿ ಸುರೇಶ್ ಹಾಗೂ ಪರಶಿವಮೂರ್ತಿ ಸಹಕಾರ ನೀಡಿದ್ದಾರೆ ಎಂದು ಕೆ.ಸಿ. ಮಾಲೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರೋಪ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.