ಮೈಸೂರು: ಜಿಲ್ಲೆಯಲ್ಲಿ 35 ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ. ಈ ಪೈಕಿ ಮೂರು ಜನ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಇಂದು ಫೇಸ್ ಬುಕ್ ಲೈವ್ನಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗಿವೆ. ಹೆಚ್ಚಿನ ಮಧುಮೇಹದಿಂದಾಗಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಸ್ಟಿರಾಯಿಡ್ ಜಾಸ್ತಿ ಕೊಡುತ್ತಿರುವುದಿಂದ ರೋಗಿಗಳಲ್ಲಿ ಇಮ್ಯುನಿಟಿ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಕೊರತೆ ಇಲ್ಲ. ಆಕ್ಸಿಜನ್ ಬೆಡ್ ಬೇಡಿಕೆ ಕಡಿಮೆಯಾಗಿದೆ. ಆದರೂ ಆಕ್ಸಿಜನ್ ಬೆಡ್ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ ಎಂದಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ನಿಖರ ಕಾರಣ ಗೊತ್ತಿಲ್ಲ. ಇಮ್ಯುನಿಟಿ ಕಡಿಮೆಯಾದವರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುವುದು. ಎಲ್ಲರೂ ಅದನ್ನು ಸೇವಿಸಿ ಮನೆಯಲ್ಲೇ ಇರಿ ಎಂದು ಮನವಿ ಮಾಡಿದರು.
ಕೆ ಆರ್ ನಗರದಲ್ಲಿ ಸೋಂಕಿತರ ಸಾವುಗಳು ಹೆಚ್ಚಾಗುತ್ತಿದ್ದವು. ಇದಕ್ಕೆ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯಿಡ್ ನೀಡಿದ್ದು, ಈ ಬಗ್ಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದವರನ್ನು ಕರೆದು ಮಾತನಾಡಲಾಗಿದೆ. ಹಾಗೆ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಾವಿನ ಶೇಕಡಾವಾರು ಪ್ರಮಾಣ ಕಡಿಮೆಯಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 1.86% ಇದ್ದರೆ, ಮೈಸೂರು ಜಿಲ್ಲೆಯಲ್ಲಿ 0.63% ಇದೆ. ಇದಕ್ಕೆ ಕಾರಣ ಮೈಸೂರಿನಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂರಿ ಹೇಳಿದರು.