ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವೆಡೆ ನೆರೆ ಹಾವಳಿಯಿಂದ ಮನೆಗಳು ಜಲಾವೃತವಾಗಿ ಜನರು ಸಂಕಷ್ಟದಲ್ಲಿದ್ದರು. ಮನೆಗಳಲ್ಲಿ ಇರಲಾಗದ, ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ನೂರಾರು ಜನರು ದ.ಕ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಪುನರ್ವಸತಿ ಕೇಂದ್ರದಲ್ಲಿ ಜೀವನ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಈವರೆಗೆ 1019 ಮಂದಿಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಂಗಳೂರಿನ ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ ಶಿಳ್ಳೆಕ್ಯಾತ ಜನಾಂಗದವರು ಹೆಚ್ಚಿದ್ದು, ಮಳೆ ಹಾನಿಯಿಂದ ಚಿಂತೆಗೊಳಗಾಗಿದ್ದಾರೆ. ಇಲ್ಲಿ ಇರುವ ಸಂತ್ರಸ್ತರ ಪೈಕಿ ಓರ್ವ ಮಹಿಳೆ ತನ್ನ ಒಂದೂವರೆ ವರುಷದ ಮಗುವನ್ನು ಮಳೆಗೆ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ಮನೆಯ ಸಾಮಾನುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮುಂದೇನು ಚಿಂತೆ ಎಂಬುದು ಮನೆಮಾಡಿದೆ.
ದ.ಕ ಜಿಲ್ಲೆಯಲ್ಲಿ ಹಲವೆಡೆ ಮನೆಗಳು ಇನ್ನೂ ಜಲಾವೃತ ಜೆಪ್ಪಿನಮೊಗರುವಿನ ಪುನರ್ವಸತಿ ಕೇಂದ್ರದಲ್ಲಿ 14 ಕುಟುಂಬದ 60 ಮಂದಿ ಇದ್ದು, ಸದ್ಯ ಸರ್ಕಾರದ ವ್ಯವಸ್ಥೆಯಿಂದ ಇವರಿಗೆ ಅನ್ನ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಸಿಬ್ಬಂದಿ ಜೊತೆಗೆ ಎಸ್ಪಿವೈಎಸ್ಎಸ್ ಸಂಸ್ಥೆ ಸಿಬ್ಬಂದಿ ಇವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದು, ಚಿಂತೆ ದೂರ ಮಾಡಲು ಮಕ್ಕಳಿಗೆ ಆಟದ ವ್ಯವಸ್ಥೆ ಮಾಡಿದ್ದಾರೆ.
ಒಟ್ಟಿನಲ್ಲಿ ಪುನರ್ವಸತಿ ಕೇಂದ್ರದಿಂದ ಮನೆಗೆ ಹೋಗುವ ತವಕದಲ್ಲಿರುವ ಜನ ಮುಂದೇನು ಎಂದು ಚಿಂತಿಸುತ್ತಿದ್ದಾರೆ.