ಮಂಗಳೂರು(ದಕ್ಷಿಣ ಕನ್ನಡ) : ಬಿಜೆಪಿ ಪಕ್ಷವು ಹಿಂದುತ್ವ, ಆರ್ಥಿಕ, ವಿದೇಶಾಂಗ ನೀತಿಗಳು ಸೇರಿದಂತೆ ತನ್ನ ಮೂಲ ಸಿದ್ಧಾಂತದಿಂದ ಹಿಂದೆ ಸರಿಯುತ್ತಿದೆ.
ಇದನ್ನು ಸರಿಪಡಿಸಬೇಕು ಎಂಬುದು ನನ್ನ ಪ್ರತಿಪಾದನೆಯಾಗಿದೆಯೇ ಹೊರತು, ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಯಲ್ಲ. ಅವರು ಅನುಸರಿಸುತ್ತಿರುವ ನೀತಿಯನ್ನು ಮಾತ್ರ ವಿರೋಧಿಸುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಚೀನಾದ ಆಕ್ರಮಣಕಾರಿ ನೀತಿಯ ವಿರುದ್ಧ ನರೇಂದ್ರ ಮೋದಿ ಸರ್ಕಾರದ ದುರ್ಬಲ ನಡೆಗೆ ತೀವ್ರ ಅಸಮಾಧಾನವಿದೆ.
ರಾಮಸೇತು ಒಡೆಯುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ಹೆರಿಟೇಜ್ ಆಗಿ ಪರಿಗಣಿಸುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿಲ್ಲ. ಈ ಕುರಿತ ಅಸಮಾಧಾನವನ್ನು ಪತ್ರಗಳ ಮೂಲಕ ವ್ಯಕ್ತಪಡಿಸಿದ್ದೇನೆ ಎಂದರು.