ಸುಬ್ರಹ್ಮಣ್ಯ: ಮಕ್ಕಳಿಬ್ಬರು ಸೇರಿ ಹಂದಿ ಮಾಂಸದ ಊಟಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಅಂಜೇರಿಯಲ್ಲಿ ನಡೆದಿದೆ.
ತಂದೆಗೆ ವಿಷವಿಕ್ಕಿ ಕೊಲೆಗೆ ಯತ್ನ; ಮಕ್ಕಳಿಬ್ಬರು ಅಂದರ್ - ಸುಬ್ರಹ್ಮಣ್ಯ ಮಂಗಳೂರು ಲೆಟೆಸ್ಟ್ ನ್ಯೂಸ್
ದೇವಿಪ್ರಸಾದ್ ಮತ್ತು ಲೋಕೇಶ್ ಎಂಬುವವರು ತಮ್ಮ ತಂದೆ ಹೊನ್ನಪ್ಪ ನಾಯ್ಕ ಅಂಜೇರಿಯವರು ಸೇವಿಸುವ ಪದಾರ್ಥಕ್ಕೆ ವಿಷ ಬೆರೆಸಿ ಹತ್ಯೆಗೈಯಲು ಮುಂದಾದ ಘಟನೆ ನಡೆದಿದೆ. ಸದ್ಯ ಹೊನ್ನಪ್ಪ ನಾಯ್ಕ ಚೇತರಿಸಿಕೊಂಡಿದ್ದಾರೆ.
ವಿಷಯುಕ್ತ ಆಹಾರ ಸೇವಿಸಿ ಹೊನ್ನಪ್ಪ ನಾಯ್ಕ ಅಂಜೇರಿ (ತಂದೆ) ಅಸ್ವಸ್ಥಗೊಂಡಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓರ್ವ ಮಗ ಲೊಕೇಶ್ ಎಂಬವವರು ಹೊನ್ನಪ್ಪರವರ ಮನೆ ಬಳಿಯಲ್ಲೇ ಕೊಟ್ಟಿಗೆಯಲ್ಲಿ ವಾಸವಿದ್ದು, ಇನ್ನೋರ್ವ ಮಗ ದೇವಿಪ್ರಸಾದ್ ಸುಳ್ಯದ ಗುತ್ತಿಗಾರಿನಲ್ಲಿ ವಾಸವಿದ್ದಾರೆ. ಜು. 23ರ ರಾತ್ರಿ ಹೊನ್ನಪ್ಪರವರ ಮನೆಯಲ್ಲಿ ಹಂದಿ ಮಾಂಸದ ಪದಾರ್ಥ ಮಾಡಿದ್ದು, ಅವರು ಊಟ ಮಾಡಿ ಮಲಗಿದ್ದರು. ರಾತ್ರಿ ದೇವಿಪ್ರಸಾದ್ ಹಂದಿ ಮಾಂಸ ಪದಾರ್ಥಕ್ಕೆ ವಿಷ ಬೆರೆಸಿದ್ದು, ಇದಕ್ಕೆ ಲೊಕೇಶ್ ಕೂಡಾ ಸಹಕರಿಸಿದ್ದಾರೆ ಎಂದು ದೂರಲಾಗಿದೆ.
ಜು.24 ರ ಬೆಳಗ್ಗೆ ಹೊನ್ನಪ್ಪ ಬೇಗ ಕೆಲಸಕ್ಕೆ ಹೋಗುವ ಸಲುವಾಗಿ ಹಂದಿ ಮಾಂಸದ ಪದಾರ್ಥದೊಂದಿಗೆ ಆಹಾರ ಸೇವಿಸಿದ್ದು, ಬಳಿಕ ವಾಂತಿ ಮಾಡಿಕೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಾಗ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಚೇತರಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಹೊನ್ನಪ್ಪ ಅವರ ಪತ್ನಿಯು ಇಬ್ಬರು ಪುತ್ರರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.