ಕರ್ನಾಟಕ

karnataka

ETV Bharat / city

ಕಾರು ಖರೀದಿಗೆ ತೆರಳಿದವರಿಂದ 2 ಲಕ್ಷ ರೂ. ದರೋಡೆ ಕೇಸ್​.. 8 ಮಂದಿ ಆರೋಪಿಗಳಿಗೆ 7 ವರ್ಷ ಕಠಿಣ ಸಜೆ

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ತೆರಳಿದವರಿಂದ 2 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಖದೀಮರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದೆ.

Judgement
ನ್ಯಾಯಾಲಯ

By

Published : Apr 2, 2022, 12:51 PM IST

ಮಂಗಳೂರು: ಕಾರು ಕೊಡಿಸುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳಿಗೆ 7 ವರ್ಷ ಕಠಿಣ ಸಜೆಯನ್ನು ವಿಧಿಸಿ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಆದೇಶ ಹೊರಡಿಸಿದ್ದಾರೆ. ಕಿಲೆಂಜಾರು ಗ್ರಾಮದ ಶಿವಪ್ರಸಾದ್ ಅಲಿಯಾಸ್ ಅಯ್ಯಪ್ಪ (30), ಸಂದೀಪ್ ಬಿ ಪೂಜಾರಿ (28), ಕಾರ್ತಿಕ್ ಶೆಟ್ಟಿ (27), ತೆಂಕ ಎರ್ಮಾಲಿನ ವರುಣ್ ಕುಮಾರ್(26), ಹೆಜಮಾಡಿಯ ಸುವಿನ್ ಕಾಂಚನ್ (25), ಪಡುಪೆರಾರದ ಗೋಪಾಲಗೌಡ (39), ಕೊಡೆತ್ತೂರಿನ ಸುಜಿತ್ ಶೆಟ್ಟಿ ಮತ್ತು ಸುಧೀರ್ ಶಿಕ್ಷೆಗೊಳಗಾದವರು.

ಅಶೋಕ ನಗರದ ಚಿದಾನಂದ ಶೆಟ್ಟಿ ಎಂಬವರು ಹಳೆ ಕಾರು ಖರೀದಿಗೆ ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಕಿಲೆಂಜಾರಿನ ಸುಧೀರ್ ಎಂಬಾತ ತಾನು ಅವಿನಾಶ್ ಎಂದು ಸುಳ್ಳು ಪರಿಚಯಿಸಿಕೊಂಡು ತನ್ನ ಚಿಕ್ಕಪ್ಪನ ಹಳೆಯ ಕಾರು ಮಾರಾಟಕ್ಕಿದೆ ಎಂದು ಹೇಳಿದ್ದ. ಅವರ ಮನೆ ತಾಳಿಪ್ಪಾಡಿಯಲ್ಲಿದ್ದು, ಹಣದೊಂದಿಗೆ ಬರುವಂತೆ ತಿಳಿಸಿದ್ದ. ಇದನ್ನು ನಂಬಿದ ಚಿದಾನಂದ ಅವರು ಗೆಳೆಯರಾದ ಅಶ್ವಿತ್ ಮತ್ತು ಭರತ್ ಅವರೊಂದಿಗೆ 2 ಲಕ್ಷ ರೂ. ದೊಂದಿಗೆ ತೆರಳಿದ್ದರು. ಅಲ್ಲಿಗೆ ತಲುಪಿದಾಗ ಈ ಎಂಟು ಮಂದಿ ಆರೋಪಿಗಳು ತಲ್ವಾರ್​, ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ 2 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿದ್ದರು.

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಲಾಗಿದೆ. ಆರೋಪಿಗಳಿಗೆ 7 ವರ್ಷ ಕಠಿಣ ಸಜೆ, ತಲಾ 5 ಸಾವಿರ ದಂಡ ಮತ್ತು ಕಲಂ 440 ರಡಿ ಎಸಗಿದ ಅಪರಾಧಕ್ಕೆ 2 ವರ್ಷ ಸಾದಾ ಸಜೆ ಹಾಗೂ ಪ್ರತಿಯೊಬ್ಬರಿಗೂ 5 ಸಾವಿರ ದಂಡ ವಿಧಿಸಲಾಗಿದೆ.

ಇದನ್ನೂ ಓದಿ:ರಾಮ ದೇಗುಲದ ಹೊರಗೆ ಅನ್ಯ ಕೋಮಿನವರಿಂದ ಪ್ರಾರ್ಥನೆ.. ಎರಡು ಗುಂಪುಗಳ ನಡುವೆ ಘರ್ಷಣೆ

ABOUT THE AUTHOR

...view details