ಮಂಗಳೂರು: ದಸರಾ ಹಬ್ಬದ ಸಂದರ್ಭ ಮೈಸೂರು ಭಾಗದಲ್ಲಿ ದಸರಾ ಗೊಂಬೆಗಳನ್ನು ಮನೆಯಲ್ಲಿಟ್ಟು ಆರಾಧಿಸುವುದು ಸಾಮಾನ್ಯ. ಆದರೆ ಈ ಸಂಸ್ಕೃತಿ ಇದೀಗ ಕರಾವಳಿ ಜಿಲ್ಲೆಯಲ್ಲೂ ಸಹ ಕಾಣಿಸಿಕೊಂಡಿದ್ದು, ನಮ್ಮವರು ಎಂಬ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ.
ಮಂಗಳೂರಿನಲ್ಲಿ ಗೊಂಬೆ ಪ್ರದರ್ಶನ ಹೌದು, ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರಿನ ಜನರು ಸೇರಿ 'ವಿಪ್ರಕೂಟ ನಮ್ಮವರು' ಎಂಬ ಸಂಘಟನೆಯನ್ನು ಕಟ್ಟಿಕೊಂಡು ದಸರಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಗೊಂಬೆ ಪ್ರದರ್ಶನ ಮಾಡುವ ಮೂಲಕ ಮೈಸೂರಿನ ಸಂಸ್ಕೃತಿಯನ್ನು ತುಳುನಾಡಿನವರಿಗೆ ಪರಿಚಯಿಸುತ್ತಿದ್ದಾರೆ.
ಕಳೆದ ಒಂದು ದಶಕಗಳಿಂದ ನಮ್ಮವರು ಸಂಘಟನೆ ದಸರಾ ಗೊಂಬೆ ಪ್ರದರ್ಶನ ಮಾಡುತ್ತಿದ್ದು, ಈ ಬಾರಿ ಜಿಲ್ಲೆಯ ಶರಣು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಈ ದಸರಾ ಗೊಂಬೆ ಪ್ರದರ್ಶನ ನಡೆಯುತ್ತಿದೆ. ಪ್ರತಿ ವರ್ಷವೂ ವಿಶೇಷ ವಿಷಯದೊಂದಿಗೆ ಗೊಂಬೆ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಜನರು ತಂಡೋಪತಂಡವಾಗಿ ಬಂದು ಪ್ರದರ್ಶನ ವೀಕ್ಷಿಸುತ್ತಿದ್ದಾರೆ.
ಈ ಬಾರಿ ಶ್ರೀಕೃಷ್ಣನ ಗೊಂಬೆಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ದಸರಾ ಗೊಂಬೆ ಪ್ರದರ್ಶನದಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪ್ರದರ್ಶನದ ಮೂಲಕ ಮೈಸೂರಿನ ಶ್ರೀಮಂತ ಪರಂಪರೆಯನ್ನು ಕರಾವಳಿಗರಿಗೆ ಪರಿಚಯಿಸುತ್ತಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.